ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೆಜಿಕೆ, ಶಾರದಾ, ಬಸವಣ್ಯಪ್ಪ ಕಣಕ್ಕೆ

Lingaraj Badiger
Updated On : 16 Apr 2013, 10:50 am

ಕ.ಪ್ರ ವಾರ್ತೆ, ಶಿವಮೊಗ್ಗ, ಏ.15
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ಬಿಜೆಪಿಯಿಂದ ಕೆ.ಜಿ. ಕುಮಾರಸ್ವಾಮಿ,  ಜೆಡಿಎಸ್‌ನಿಂದ ಶಾರದಾ ಪೂರ್ಯಾನಾಯ್ಕ, ಕೆಜೆಪಿಯಿಂದ ಬಸವಣ್ಯಪ್ಪ, ಕಾಂಗ್ರೆಸ್‌ನಿಂದ ಕರಿಯಣ್ಣ  ನಾಮಪತ್ರ ಸಲ್ಲಿಸಿದರು.
ಈ ಮೂಲಕ ಶಿವಮೊಗ್ಗ ಗ್ರಾಮಾಂತರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಹುತೇಕ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೆಲ್ಲರೂ ಸೋಮವಾರ ನಾಮಪತ್ರ ಸಲ್ಲಿಸಿದಂತಾಗಿದೆ.
ಈ ಮಧ್ಯೆ ಕೆಜೆಪಿ ಬಂಡಾಯ ಮುಂದುವರಿದಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಶಿವರುದ್ರಸ್ವಾಮಿ ಕಣಕ್ಕಿಳಿದಿದ್ದಾರೆ. ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯಾಗಿ ರುದ್ರಸ್ವಾಮಿ ನಾಮಪತ್ರ ಸಲ್ಲಿಸಿದರು. ನಗರದ ಬಾಲರಾಜ  ಅರಸ್ ರಸ್ತೆಯಲ್ಲಿ ತೆರೆದಿರುವ ನಾಮಪತ್ರ ಸಲ್ಲಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿ ಗಿರೀಶ್ ನಾಮಪತ್ರಗಳನ್ನು ಸ್ವೀಕರಿಸಿದರು.  
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಆಗಮಿಸಿದ್ದ ಜೆಡಿಎಸ್  ಅಭ್ಯರ್ಥಿ ಶಾರದಾ ಪೂರ್ಯಾ ನಾಯಕ್ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಕೆಲ ಹೊತ್ತಿನವರೆಗೆ ಬಾಲರಾಜ ಅರಸ್ ರಸ್ತೆ ಜೆಡಿಎಸ್‌ಮಯವಾಗಿ ಮಾರ್ಪಟ್ಟಿತು.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಶಿವರುದ್ರಯ್ಯ ಸ್ವಾಮಿ, ವಿವಿಧ ಪಕ್ಷಗಳಲ್ಲಿರುವ  ಗೊಂದಲದಿಂದ ಕಾರ್ಯಕರ್ತರು ಬೇಸರಗೊಂಡಿದ್ದು ಇದರಿಂದಾಗಿ ತಮ್ಮ ಗೆಲುವು ಸಾಧ್ಯತೆ ಹೆಚ್ಚಾಗಿದೆ ಎಂದರು.
ವಿವಿಧ ಪಕ್ಷಗಳಿಂದ ನಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ವಯೋವಾನದಲ್ಲಿ ಹಿರಿಯರಾಗಿರುವ ಅಭ್ಯರ್ಥಿಗಳು ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಮಗೆ ಬೆಂಬಲ ಹೆಚ್ಚಾಗಿದೆ ಎಂದರು.
ಗೆಲುವಿನ ವಿಶ್ವಾಸ: ಕಾಂಗ್ರೆಸ್ ಅಭ್ಯರ್ಥಿ ಕೆ. ಕರಿಯಣ್ಣ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಬಾರಿ ಕ್ಷೇತ್ರ ಪುನರ್ ವಿಂಗಡಣೆಯಾದ ಕಾರಣ ಸೋಲು ಅನುಭವಿಸಬೇಕಾಯಿತು. ಆದರೆ, ಈ ಬಾರಿ  ಕಾಂಗ್ರೆಸ್ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮತದಾರರು  ಕೂಡ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರದಿಂದ ಜನತೆ ಬೇಸತ್ತಿದ್ದಾರೆ. ಅಲ್ಲದೆ ಬಿಜೆಪಿ  ಹೋಳಾಗಿ ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ರಚನೆಯಾಗಿದೆ. ಇದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲಾಭ ಉಂಟಾಗಲಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ  ಮುಖ್ಯಮಂತ್ರಿ ಆಗಬೇಕೆಂಬುದು ಮತದಾರರ ಅನಿಸಿಕೆಯಾಗಿದೆ. ಇದರಿಂದಾಗಿ ಜೆಡಿಎಸ್‌ನ ಅಭ್ಯರ್ಥಿಗಳ ಪರ ಅಲೆ ಎದ್ದಿದೆ ಎಂದು ಹೇಳಿದರು.
ರೋಸಿ ಹೋದ ಜನ: ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ವಿಜಯದ ಬಾವುಟ ಹಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇತರೆ ಪಕ್ಷಗಳ ರಾಜಕೀಯದಿಂದ ಕ್ಷೇತ್ರದ ಜನ ರೋಸಿ ಹೋಗಿದ್ದಾರೆ ಎಂದರು.
ಕೆಜೆಪಿ ಅಭ್ಯರ್ಥಿ ಬಸವಣ್ಯಪ್ಪ ಮಾತನಾಡಿ, ಕ್ಷೇತ್ರದ ಜನತೆಯ ನಾಡಿಮಿಡಿತದ ಬಗ್ಗೆ ಅರಿವಿದ್ದು, ಈ ಬಾರಿಯ ಚುನಾವಣೆಯಲ್ಲಿ ತಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಳೆಹೊನ್ನೂರು ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಸಚಿವನಾಗಿಯೂ ಸೇವೆ ಸಲ್ಲಿಸಿದ್ದೇನೆ. ತಮ್ಮ ಅಧಿಕಾರಾವಧಿಯಲ್ಲಿ ಜನತೆಯ ಸಮಸ್ಯೆಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಪಟ್ಟಿದ್ದೇನೆ. ಇದು ಜನರ ಮನಸ್ಸಿನಲ್ಲಿ ಬೇರೂರಿದೆ, ಹೀಗಾಗಿ ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement