ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಣ

Lingaraj Badiger
Updated On : 16 Apr 2013, 10:49 am

ಕಪ್ರ ವಾರ್ತೆ, ಶಿವಮೊಗ್ಗ, ಏ.15
ಸೋಮವಾರ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ಅಂಕಣ ಅಕ್ಷರಶಃ ರಂಗೇರಿತ್ತು. ನಾಮಪತ್ರ ಸಲ್ಲಿಕೆ ಕೇಂದ್ರಗಳು ವಿವಿಧ ಪಕ್ಷಗಳ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದ್ದವು.
 ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ನಾಮಪತ್ರ ಸಲ್ಲಿಸಿದ ಪ್ರಮುಖರು.
 ಎಸ್. ರುದ್ರೇಗೌಡರವರು ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಹಾಗೂ ಕೆ.ಬಿ.ಪ್ರಸನ್ನಕುಮಾರ್ ಅವರು ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಪ್ರತ್ಯೇಕವಾಗಿ ತಮ್ಮ ಪಕ್ಷದ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯ ಮೂಲಕ ನಗರಸಭೆ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾದ ಜನಾರ್ದನ್ ಅವರು ಉಮೇದುವಾರಿಕೆ ಅರ್ಜಿ ಸ್ವೀಕರಿಸಿದರು. ಉಳಿದಂತೆ ಪತ್ರಕರ್ತ ಗಾ.ರ. ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಪ್ರತಿಜ್ಞಾವಿಧಿ ಸ್ವೀಕಾರ: ನಾಮಪತ್ರ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿ ಚುನಾವಣಾಧಿಕಾರಿ ಸಮ್ಮುಖದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ, ಸಂಬಂಧಿಸಿದ ಪತ್ರಕ್ಕೆ ಸಹಿ ಹಾಕಿದ್ದು ವಿಶೇಷವಾಗಿತ್ತು.
 ನಾಮಪತ್ರ ಪರಿಶೀಲನೆ ನಡೆಸಿದ ನಂತರ ಚುನಾವಣಾಧಿಕಾರಿ ಅಭ್ಯರ್ಥಿಗೆ ಪ್ರತಿಜ್ಞಾ ವಿಧಿ ಬರಹವನ್ನೊಳಗೊಂಡ ಪತ್ರವೊಂದನ್ನು ನೀಡಿ ಓದಿ ಹೇಳುವಂತೆ ಸೂಚಿಸುತ್ತಿದ್ದರು. ಅದರಂತೆ ಅಭ್ಯರ್ಥಿ ಪ್ರಮಾಣ ಮಾಡಿ ಪತ್ರವನ್ನೊದುತ್ತಿದ್ದರು. ನಂತರ ಆ ಪತ್ರಕ್ಕೆ ಸಹಿ ಹಾಕಿ ಚುನಾವಣಾಧಿಕಾರಿಗಳಿಗೆ ನೀಡಿದರು.
 ಚುನಾವಣೆಯಲ್ಲಿ ಯಾವುದೆ ಅಕ್ರಮ ಎಸಗದೆ, ನಿಷ್ಪಕ್ಷಪಾತವಾಗಿ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ಬರದಂತೆ ನೈಜ ಚುನಾವಣೆ ನಡೆಸುವುದಾಗಿ ಅಭ್ಯರ್ಥಿಯೂ ಪ್ರತಿಜ್ಞೆ ಸ್ವೀಕರಿಸಿದರು.
ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಅಭ್ಯರ್ಥಿ ಸೇರಿದಂತೆ ಐವರ ಪ್ರವೇಶಕ್ಕೆ ಮಾತ್ರ ಚುನಾವಣಾ ಆಯೋಗ ಅನುಮತಿ ನೀಡಿದೆ. ಆದರೆ ಕೆಲ ಕೇಂದ್ರಗಳಲ್ಲಿ ಅಭ್ಯರ್ಥಿಯ ಜೊತೆ ನಾಲ್ಕಕ್ಕಿಂತ ಹೆಚ್ಚು ಬೆಂಬಲಿಗರು ಕೇಂದ್ರದೊಳಗೆ ಆಗಮಿಸಿದ ಘಟನೆ ನಡೆಯಿತು.
 ಈ ವೇಳೆ ಚುನಾವಣಾಧಿಕಾರಿಗಳು ಹೆಚ್ಚುವರಿ ಬೆಂಬಲಿಗರನ್ನು ಹೊರ ಕಳುಹಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದರು. ಆದರೆ ನಿಯಮದ ಅರಿವಿರದ ಕೆಲ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಚುನಾವಣಾಧಿಕಾರಿಗಳಿಗೆ ಈ ಕುರಿತಂತೆ ಸಮಜಾಯಿಷಿ ಕೋರುತ್ತಿದ್ದದು ಕಂಡುಬಂತು.
ಕಣಕ್ಕಿಳಿದ ಚುನಾವಣಾ ಕಲಿಗಳು
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಉಳಿದಿರುವಂತೆ ಬಹಳಷ್ಟು ಅಭ್ಯರ್ಥಿಗಳಿಗೆ ಸೋಮವಾರ ಶುಭ ಸೋಮವಾರವಾಗಿತ್ತು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಚುನಾವಣಾಧಿಕಾರಿ ಕಚೇರಿಗಳಲ್ಲಿ ಭಾರಿ ಚಟುವಟಿಕೆ ನಡೆದಿದ್ದವು. 7 ಕ್ಷೇತ್ರಗಳಲ್ಲಿಯೂ ಸಹ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
 ಜಿಲ್ಲೆಯಾದ್ಯಂತ ಮೊದಲ ಕಂತಿನಲ್ಲಿ ಮೂರು, ಎರಡನೇ ಕಂತಿನಲ್ಲಿ ಏಳು ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಸೋಮವಾರ ಒಟ್ಟು 45 ನಾಮಪತ್ರ ಸಲ್ಲಿಕೆಯಾದವು.
ಭದ್ರಾವತಿ ಹೊರತು...: ಕೆಜೆಪಿ ಅಭ್ಯರ್ಥಿಗಳು ಭದ್ರಾವತಿ ಹೊರತುಪಡಿಸಿ ಎಲ್ಲಾ ಕ್ಷೇತ್ರದಲ್ಲಿಯೂ ಕಣಕ್ಕಿಳಿದಂತಾಗಿದೆ. ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಭಾರಿ ಮೆರವಣಿಗೆಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
 ಶಿವಮೊಗ್ಗ ನಗರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಗಳೂ ಕಣಕ್ಕಿಳಿದರು. ಶಿವಮೊಗ್ಗ ಅಭ್ಯರ್ಥಿ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಏ.17ರಂದು ನಾಮಪತ್ರ ಸಲ್ಲಿಸುವರು.
 ಜಾತ್ಯತೀತ ಜನತಾದಳ ಅಭ್ಯರ್ಥಿಗಳು ಶಿವಮೊಗ್ಗ- ಶಿಕಾರಿಪುರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕಡೆ ಕಣಕ್ಕಿಳಿದಂತಾಗಿದೆ. ಕೊನೆ ಕ್ಷಣದಲ್ಲಿ ಜೆಡಿಎಸ್ ಸೇರಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಹ ಸೋಮವಾರ ನಾಮಪತ್ರ ಸಲ್ಲಿಸಿದರು. ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ, ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು 17ರಂದು ನಾಮಪತ್ರ ಸಲ್ಲಿಸುವರು.
ಬಿಎಸ್‌ಆರ್ ಕಾಂಗ್ರೆಸ್ ತೀರ್ಥಹಳ್ಳಿಗೆ ಪದಾರ್ಪಣೆ ಮಾಡಿದೆ. ಅಭ್ಯರ್ಥಿ ಘೋಷಣೆಯಾಗಿದ್ದರೂ ಇನ್ನೂ ಸಂಯುಕ್ತ ಜನತಾದಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ.
ಭದ್ರಾವತಿ ಅಚ್ಚರಿ: ಭದ್ರಾವತಿ ಕ್ಷೇತ್ರದಲ್ಲಿ ಒಂದು ಅಚ್ಚರಿ ಕಾದಿತ್ತು. ಕೆಪಿಸಿಸಿಯು ಇನ್ನೂ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ ಇದರ ಜತೆಗೆ ಪ್ರಮಾಣಪತ್ರ ಹಾಗೂ ಬಿ ಫಾರಂ ಸಲ್ಲಿಸಿಲ್ಲ. ಅಂತಿಮವಾಗಿ ಸಿ.ಎಂ. ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
 ಕಾಂಗ್ರೆಸ್ ರಾಜ್ಯದಲ್ಲಿ ಅಭ್ಯರ್ಥಿ ಘೋಷಿಸದಿರುವ 9 ಕ್ಷೇತ್ರಗಳಲ್ಲಿ ಭದ್ರಾವತಿಯೂ ಒಂದು. ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರೇ ಇಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಈ ಹಿಂದೆ ಒಂದೆರಡು ಬಾರಿ ಇಲ್ಲಿಗೆ ಆಗಮಿಸಿದ ತಮ್ಮ ಹಳೆಯ ಸ್ನೇಹಿತರೊಂದಿಗೆ ಚರ್ಚೆಯನ್ನೂ ನಡೆಸಿದ್ದರು. ಈ ನಡುವೆ ಬಿ.ಕೆ. ಸಂಗಮೇಶ್ವರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
 ಇವರು ಸಲ್ಲಿಸಿರುವ ನಾಮಪತ್ರವು ಕಾಂಗ್ರೆಸ್ ಬಿ ಫಾರಂ ಜತೆಗೂಡಿದ್ದರೆ ಮಾತ್ರ ಊರ್ಜಿತವಾಗುತ್ತದೆ. ಇಲ್ಲದಿದ್ದರೆ ತಿರಸ್ಕೃತವಾಗುತ್ತದೆ. ಇನ್ನು ಸೊರಬ ಕ್ಷೇತ್ರದಲ್ಲಿ ಹರತಾಳು ಹಾಲಪ್ಪ ಅವರು ಏ.10ರಂದೇ ನಾಮಪತ್ರ ಸಲ್ಲಿಸಿದ್ದರು. ಆದರೆ ಅಂದು ಕೆಜೆಪಿ ಬಿ ಫಾರಂ ಸಲ್ಲಿಸಿರಲಿಲ್ಲ. ಹಾಗಾಗಿ ಸೋಮವಾರ ಬಿ.ಫಾರಂ ಜತೆಗೆ ಮತ್ತೊಂದು ನಾಮಪತ್ರ ಸಲ್ಲಿಸಿದರು.
ಜಿಲ್ಲೆಯಾದ್ಯಂತ ಚುನಾವಣಾ ಕಣ ರಂಗೇರಿದ್ದು, ಎಲ್ಲರೂ ಈಗ ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಧು ಬಂಗಾರಪ್ಪ ನಾಮಪತ್ರ
ಸೊರಬ: ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಸೋಮವಾರ ನಾಮಪತ್ರ ಸಲ್ಲಿಸಿದರು.
 ಕ್ಷೇತ್ರದ ವಿವಿಧ ಭಾಗಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದ ಅಪಾರ ಬೆಂಬಲಿಗರೊಂದಿಗೆ ಅವರ ತಾಯಿ ಶಕುಂತಲ ಬಂಗಾರಪ್ಪ, ಪತ್ನಿ ಅನಿತಾ ಮಧುಬಂಗಾರಪ್ಪ ಹಾಗೂ ಸಹೋದರಿಯರೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಂತರ ಬಂಗಾರ ಧಾಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಅಪಾರ ಭರವಸೆ: ತಂದೆಯವರ ಆದರ್ಶ, ಶಕ್ತಿಯನ್ನು ನಾನು ಇಂದು ನಿಮ್ಮಲ್ಲಿ ಕಂಡಿದ್ದೇನೆ. ಅವರ ಕಡೆಯ ಆಸೆಯನ್ನು ಈಡೇರಿಸುತ್ತೀರಿ ಎಂಬ ಅಪಾರ ಭರವಸೆಯನ್ನು ಹೊತ್ತಿರುವ ನನಗೆ ನಿರಾಸೆ ಆಗದಂತೆ ಹರಸಬೇಕಾದವರು ನೀವು. ಈಗಾಗಲೇ ಎರಡು ಬಾರಿ ಸೋಲುಂಡರೂ 10 ವರ್ಷ ನಾನು ನಿಮ್ಮೊಂದಿಗಿದ್ದು, ಸ್ಪಂದಿಸಿದ್ದೇನೆ. ಇನ್ನು ಕೇವಲ 20 ದಿನ ನನ್ನೊಂದಿಗಿರಿ, ಮುಂದೆ 30 ವರ್ಷ ನಾನು ನಿಮ್ಮೊಂದಿಗಿರುತ್ತೇನೆ ಎಂದರು.
 ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಲಪ್ಪ ವಿರುದ್ಧ ಕಿಡಿಕಾರಿದರು. ಈಗಾಗಲೇ  ಸಾಗರ ಕಾಂಗ್ರೆಸ್ ಅಭ್ಯರ್ಥಿಯನ್ನು ಎರಡು ಬಾರಿ ಸೋಲಿಸಿದ್ದಾಗಿದೆ. ವಯಸ್ಸಾದವರಿಗೆ ವಿಶ್ರಾಂತಿ ನೀಡಿ, ಯುವಜನತೆಯನ್ನು ಚುನಾಯಿಸಿ ದೇಶದ ಭವಿಷ್ಯವನ್ನು ಉತ್ತಮಗೊಳಿಸುವ ಸಂಕಲ್ಪ ಜನತೆಯದ್ದಾಗಬೇಕು ಎಂದರು.
  ಸಹೋದರಿಯರಾದ ಸುಜಾತ ತಿಲಕ್ ಕುಮಾರ್, ಅನಿತಾ ಪವನ್ ಕುಮಾರ್, ಶಿಕಾರಿಪುರ ಜೆಡಿಎಸ್ ಅಭ್ಯರ್ಥಿ ವಿ.ಪಿ. ಬಳಿಗಾರ್,  ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಎನ್. ಕುಮಾರ್, ಮೈಸೂರು ಗೋವಿಂದರಾಜ್, ಎಂ.ಡಿ. ಶೇಖರ್ ಇದ್ದರು.

ಈಶ್ವರಪ್ಪನವರೇ ಬೇರೆ ಕ್ಷೇತ್ರ ಹುಡುಕಿಕೊಳ್ಳಿ
ಶಿವಮೊಗ್ಗ: ನಾಮಪತ್ರ ಸಲ್ಲಿಸಲು ಇನ್ನು ಎರಡೇ ದಿನ ಬಾಕಿ ಇದ್ದು, ಅಷ್ಟರಲ್ಲಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಒಳಿತು ಎಂದು ಕೆ.ಎಸ್. ಈಶ್ವರಪ್ಪನವರಿಗೆ ಜಿಲ್ಲಾ ಕಾಂಗ್ರೆಸ್ ಸಲಹೆ ನೀಡುವ ಮೂಲಕ ಚಾಟಿ ಬೀಸಿದೆ.
 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ನಾಮಪತ್ರ ಸಲ್ಲಿಕೆಗೆ ಜನ ಸಾಗರ ಹರಿದು ಬಂದಿದ್ದು, ಮುಂದಿನ ಕಾಂಗ್ರೆಸ್ ಗೆಲುವಿನ ಛಾಯೆ ಮೂಡಿಸಿದೆ. ಹೀಗಾಗಿ ಈಶ್ವರಪ್ಪನವರು ಬೇರೆ ಕ್ಷೇತ್ರ ನೋಡಿಕೊಂಡರೆ ಒಳಿತು ಎಂದು ಹೇಳಿದರು. ನಂತರ ಮಾತನಾಡಿದ ಪಕ್ಷದ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್, ರಾಜ್ಯ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರ ಹಾಗೂ ಕಚ್ಚಾಟದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಇದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಎದ್ದಿದೆ ಎಂದು ತಿಳಿಸಿದರು.
 ಬಿಜೆಪಿ-ಕೆಜೆಪಿ ಕಚ್ಚಾಟದಿಂದ ಮತದಾರ ಬೇಸರಗೊಂಡಿದ್ದು, ಕಾಂಗ್ರೆಸ್ ಪಕ್ಷವನ್ನು ಇಷ್ಟಪಡುತ್ತಿದ್ದಾರೆ. ಅದೇ ರೀತಿ ಶಿವಮೊಗ್ಗದಲ್ಲೂ ಮತದಾರರು ಪಕ್ಷಕ್ಕೆ ಅಪಾರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಮಾಜಿ ಎಂಎಲ್‌ಸಿ ಮೀರ್ ಅಜೀಜ್ ಅಹ್ಮದ್, ಪಕ್ಷದ ಇಸ್ಮಾಯಿಲ್ ಖಾನ್, ಉಸ್ಮಾನ್, ಸೈಯದ್ ವಾಹಿದ್ ಅಡ್ಡು, ಎಸ್.ಪಿ. ದಿನೇಶ್, ಎಚ್.ಸಿ. ಯೋಗೀಶ್, ಎನ್. ರಮೇಶ್, ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಸಾರಂಗಪಾಣಿ, ಸತ್ಯನಾರಾಯಣ, ಸರ್.ಎಂ. ವಿಶ್ವೇಶ್ವರಯ್ಯ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಅನಂತ ಪದ್ಮನಾಭ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement