ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿ.ಎಸ್. ಯಡಿಯೂರಪ್ಪ ರು. 5.83 ಕೋಟಿ ಒಡೆಯ

Vishwanath S
Updated On : 16 Apr 2013, 2:03 am

ಕನ್ನಡಪ್ರಭ ವಾರ್ತೆ , ಶಿವಮೊಗ್ಗ , ಏ.15
ಕಳೆದ ಚುನಾವಣೆಗಿಂತಲೂ ಈ ಬಾರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಸ್ತಿ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.
ಇವರ ಚರಾಸ್ತಿ ಒಟ್ಟು ಮೌಲ್ಯ 1,64,25,834 ಇದ್ದರೆ, ಸ್ಥಿರಾಸ್ತಿ ಮೌಲ್ಯ 4,19,35,020 ಸೇರಿದಂತೆ ಒಟ್ಟು 5,83,60,854 ಆಸ್ತಿ ಹೊಂದಿದ್ದಾರೆ ಯಡಿಯೂರಪ್ಪ. ಈ ನಡುವೆ ಇವರ ವಿವಿಧ ಬ್ಯಾಂಕ್ ಖಾತೆಗಳಲ್ಲಿ 11,25,996 ಉಳಿತಾಯ ಮಾಡಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಯಡಿಯೂರಪ್ಪ ಅವರು ನೀಡಿರುವ ವಿವರದಂತೆ ಅವರ ಬಳಿ ಇರುವುದು ಟೊಯೋಟ ಫಾರ್ಚೂನರ್ ವಾಹನ ಮಾತ್ರ. ಇದಕ್ಕಾಗಿ ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದು, 10.89 ಲಕ್ಷ ಬಾಕಿ ಇದೆ. ಜತೆಗೆ ಇವರು ಮಕ್ಕಳಿಂದ ಹಾಗೂ ಆತ್ಮೀಯರಿಂದ ಸಾಲ ಪಡೆದಿದ್ದು, ಈ ಮೊತ್ತ 40 ಲಕ್ಷ ಇದೆ. ಅಲ್ಲದೆ, ಬೆಳ್ಳಿ ಹಾಗೂ ಬಂಗಾರದ ವಸ್ತುಗಳ ಮೌಲ್ಯ 16 ಲಕ್ಷ ಇದೆ.
ಸ್ಥಿರಾಸ್ತಿ: ವಿವಿಧೆಡೆ ಇರುವ ಜಮೀನು, ಕಟ್ಟಡಗಳ ವಿವರವನ್ನೂ ನೀಡಿದ್ದು, ಸ್ಥಿರಾಸ್ತಿ ಮೌಲ್ಯ 4,19,35,020 ಆಗಿದೆ. ಇವುಗಳ ಖರೀದಿ ಬೆಲೆ 50,59,895, ಅಭಿವೃದ್ಧಿಗಾಗಿ 1,12,61,614 ವೆಚ್ಚ ಮಾಡಿದ್ದಾರೆ. ಶಿಕಾರಿಪುರ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನು ಇದೆ. ಶಿರಾಳಕೊಪ್ಪ, ತಿಮ್ಲಾಪುರ ಹಾಗೂ ಬೆಂಗಳೂರಿನ ಆರ್‌ಎಂವಿ 2ನೇ ಹಂತದಲ್ಲಿ ಕೃಷಿಯೇತರ ಭೂಮಿ ಇದೆ.  1993ರಲ್ಲೇ ಖರೀದಿಸಿದ ವಾಣಿಜ್ಯ ಉದ್ದೇಶದ ಕಟ್ಟಡ ಶಿಕಾರಿಪುರದಲ್ಲಿದೆ. ಬೆಂಗಳೂರು ಹಾಗೂ ಶಿಕಾರಿಪುರದ ಮಾಳೇರಕೇರಿಯಲ್ಲಿ ತಲಾ ಒಂದು ಮನೆ ಇದೆ.
ಪ್ರಕರಣಗಳು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎದುರಿಸುತ್ತಿರುವ ಪ್ರಕರಣಗಳ ಸಂಖ್ಯೆ ಒಟ್ಟು 17. ಈ ಎಲ್ಲಾ ಪ್ರಕರಣಗಳೂ ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿವೆ. ಆದರೆ ಇವೆಲ್ಲವೂ ವಿಚಾರಣೆ ಹಂತದಲ್ಲಿವೆ. ಮೂರು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಈ ಪ್ರಕರಣಗಳು ಬೆಂಗಳೂರು ಹಾಗೂ ಶಿವಮೊಗ್ಗ ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿವೆ. 8 ಪ್ರಕರಣಗಳನ್ನು ಲೋಕಾಯುಕ್ತರು ತನಿಖೆ ನಡೆಸುತ್ತಿದ್ದು, ಒಂದು ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement