ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಗಮೇಶ್ವರ, ಅಪ್ಪಾಜಿ ಸೇರಿ 4 ನಾಮಪತ್ರ ಸಲ್ಲಿಕೆ

Lingaraj Badiger
Updated On : 16 Apr 2013, 10:50 am

ಕಪ್ರ ವಾರ್ತೆ, ಭದ್ರಾವತಿ, ಏ.15
ಬಿಜೆಪಿ ಅಭ್ಯರ್ಥಿ ಎಸ್.ಬಿ. ಶಿವಾಜಿರಾವ್ ಸಿಂಧ್ಯ, ಜೆಡಿಎಸ್‌ನಿಂದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಕಾಂಗ್ರೆಸ್‌ನಿಂದ ಶಾಸಕ ಬಿ.ಕೆ. ಸಂಗಮೇಶ್ವರ, ಒಬ್ಬರು ಪಕ್ಷೇತರರು ಸೇರಿದಂತೆ ನಾಲ್ವರು ನಾಮಪತ್ರ ಸಲ್ಲಿಸಿದರು.
ಶಿವಾಜಿರಾವ್ ಸಿಂಧ್ಯ ಬಸವೇಶ್ವರ ವೃತ್ತದಿಂದ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಚನ್ನಗಿರಿ ರಸ್ತೆ ಮತ್ತು ತಾಲೂಕು ಕಚೇರಿ ಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಜನ್ನಾಪುರದ ಗಣಪತಿ ದೇವಸ್ಥಾನ, ಹುತ್ತಾ ಕಾಲೋನಿಯ ಆಂಜನೇಯಸ್ವಾಮಿ ದೇವಸ್ಥಾನ, ನ್ಯೂಟೌನ್ ಅಮಲೋದ್ಭವಿ ಮಾತೆ ಚರ್ಚ್, ತರೀಕೆರೆ ರಸ್ತೆಯ ದರ್ಗಾ, ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಹಾಗೂ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪತ್ನಿ ಶಾರದಾ ಅಪ್ಪಾಜಿ ಹಾಗೂ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ಶಾಸಕ ಬಿ.ಕೆ. ಸಂಗಮೇಶ್ವರ ಎಪಿಎಂಸಿ ಅಧ್ಯಕ್ಷ ಮಣಿಶೇಖರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಣ್ಣಪ್ಪ ಸೇರಿದಂತೆ ಇತರ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದರು. ಶಿವಾಜಿರಾವ್ ಹಾಗೂ ಅಪ್ಪಾಜಿ ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ಬಿ ಫಾರಂಗಳನ್ನು ನಾಮಪತ್ರದೊಂದಿಗೆ ಸಲ್ಲಿಸಿದರೆ ಸಂಗಮೇಶ್ವರ ಅವರು ಕಾಂಗ್ರೆಸ್ ಬಿ ಫಾರಂ ಲಗತ್ತಿಸದೆ ಕಾಂಗ್ರೆಸ್ ಉಮೇದುವಾರರಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೆ ಮುನ್ನ ಅವರು ಉಪವಿಭಾಗಾಧಿಕಾರಿಗಳಲ್ಲಿ ಒಂದುವೇಳೆ ಕಾಂಗ್ರೆಸ್ ಬಿ ಫಾರಂ ಸಿಗದ ಸಂದರ್ಭದಲ್ಲಿ ತಾವು ಮತ್ತೊಂದು ನಾಮಪತ್ರ ಸಲ್ಲಿಸಲು ಅವಕಾಶವಿದೆಯೇ ಎಂದು ತಮ್ಮ ಅನುಮಾನ ಬಗೆಹರಿಸಿಕೊಂಡರು.
ಸೋಮವಾರ ಸಲ್ಲಿಸಿದ ನಾಲ್ಕು ನಾಮಪತ್ರದೊಂದಿದೆ ಚುನಾವಣಾ ಕಣದಲ್ಲಿ ನಾಮಪತ್ರ ಸಲ್ಲಿಸಿದವರ ಸಂಖ್ಯೆ 7ಕ್ಕೆ ಏರಿದೆ. ಶನಿವಾರ ಲೋಕಸತ್ತಾ ಪಕ್ಷದ ಎಸ್. ವೆಂಕಟೇಶಮೂರ್ತಿ ಹಾಗೂ ಪಕ್ಷೇತರರಾದ ಅಖಿಲ್ ಅಹಮದ್ ಮತ್ತು ಸಿದ್ದಪ್ಪಾಜಿ ನಾಮಪತ್ರ ಸಲ್ಲಿಸಿದ್ದರು.
4 ಅಭ್ಯರ್ಥಿಗಳ ನಾಮಪತ್ರ
ಸೊರಬ: ಸೋಮವಾರ ನಾಲ್ಕು ಜನ ಅಭ್ಯರ್ಥಿಗಳು  ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಸಿ.ಎನ್. ಶ್ರೀಧರ್, ಎಆರ್‌ಒ ತೇಜಸ್ ಕುಮಾರ್, ಇಎಲ್‌ಎನ್. ಶಂಕ್ರಪ್ಪರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಜೆ.ಎಸ್. ಚಿದಾನಂದಗೌಡ ತಮ್ಮ ಅನುಮೋದಕರೊಂದಿಗೆ ನಾಮಪತ್ರ ಸಲ್ಲಿಸಿದರು.
 ಮಾಜಿ ಶಾಸಕ ಹಾಲಪ್ಪ 12ರಂದು ಕೆಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಸೋಮವಾರ ಬಿ ಫಾರಂ ಸಲ್ಲಿಸಿದರು. ಇವರೊಂದಿಗೆ ರುದ್ರಗೌಡ ಕಮರೂರು, ಗುರುಕುಮಾರ್ ಪಾಟೀಲ್ ಇದ್ದರು.
 ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಮಾರ್ ಬಂಗಾರಪ್ಪ ಒಟ್ಟು 4 ಸೆಟ್ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ತಮ್ಮ ತಾಯಿ ಶಕುಂತಲಾ ಬಂಗಾರಪ್ಪ ಅವರೊಂದಿಗೆ ಒಟ್ಟು 4 ಸೆಟ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡ ಠೇವಣಿ ಹಣದೊಂದಿಗೆ ಕೇವಲ ನಾಮಪತ್ರ ಸಲ್ಲಿಸಿದ್ದು, ಮಂಗಳವಾರ ಪೂರ್ಣ ದಾಖಲೆ ನೀಡುವುದಾಗಿ ತಿಳಿಸಿದರು. ಈವರೆಗೆ 2 ರಾಷ್ಟ್ರೀಯ ಪಕ್ಷ, 2 ಪ್ರಾದೇಶಿಕ ಪಕ್ಷ, 2 ಪಕ್ಷೇತರ ಒಟ್ಟು 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement