ಈಶ್ವರಪ್ಪ ವಿಚಾರಣೆ ನಾಳೆ
ಶಿವಮೊಗ್ಗ: ಮುಸ್ಲಿಂ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತಂದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ಎದುರಿಸುತ್ತಿರುವ ಡಿಸಿಎಂ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಜಾಮೀನು ಅರ್ಜಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯನ್ನು ಏ.18ಕ್ಕೆ ಮುಂದೂಡಲಾಗಿದೆ.
ಕೆ.ಎಸ್.ಈಶ್ವರಪ್ಪನವರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸೋಮವಾರ ತಮ್ಮ ವಕೀಲ ಅಶೋಕ್ ಜಿ.ಭಟ್ ಮೂಲಕ ಸಿಆರ್‌ಪಿಸಿ ಕಲಂ 438ರ ಅಡಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಧೀಶ ಅಶೋಕ್ ಎಂ. ಶೆಟ್ಟರ್ ಅವರು ಮಂಗಳವಾರ ವಿಚಾರಣೆಯನ್ನು ಮುಂದೂಡಿದರು.
ಲವ್ ಜಿಹಾದ್: ಕೆ.ಎಸ್.ಈಶ್ವರಪ್ಪನವರು ಏ.9ರಂದು ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಭಾಷಣ ಮಾಡಿದ್ದರು.
ಶಿವಮೊಗ್ಗಮೊಂದರಲ್ಲಿಯೇ 68 ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಮುಸ್ಲಿಂ ಯುವಕರು ಲವ್ ಜಿಹಾದ್ ಹೆಸರಿನಲ್ಲಿ ಹೊತ್ತೊಯ್ದಿದ್ದಾರೆ ಎಂದು ಹೇಳಿದ್ದರು. ಇದರ ಜೊತೆಗೆ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದ್ದರು.
ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸೂಚನೆಯ ಮೇರೆಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರ - 113ರ ಫ್ಲೈಯಿಂಗ್‌ಸ್ಕಾಡ್ ತಂಡ -4ರ ಮುಖ್ಯಸ್ಥರು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು.