ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೆದ್ದವರಿಗೆ ಮತ್ತೆ ಮತ್ತೆ ಆಶೀರ್ವದಿಸಿದ ಮಲೆನಾಡು

Lingaraj Badiger
Updated On : 17 Apr 2013, 11:31 am

ಶಿವಮೊಗ್ಗ: ಮಲೆನಾಡು ಹಲವು ಚುನಾವಣಾ ವೀರರ ನೆಲೆವೀಡು. ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಈ ಜಿಲ್ಲೆಯಲ್ಲಿ ಹಲವು ರಾಜಕೀಯ ನಾಯಕರು ಮತ್ತೆ-ಮತ್ತೆ ಮತದಾರರ ಆಶೀರ್ವಾದ ಪಡೆದಿದ್ದಾರೆ. ಎರಡರಿಂದ ಎಂಟು ಸಲ ಚುನಾವಣೆಯಲ್ಲಿ ಗೆದ್ದ ಉದಾಹರಣೆಗಳು ಈ ಜಿಲ್ಲೆಯಲ್ಲಿವೆ.
 ಇವರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವುದು ಸಾರೇಕೊಪ್ಪ ಬಂಗಾರಪ್ಪ. ಯಾವಾಗ ಸೊರಬ ಕ್ಷೇತ್ರ ರಚನೆಯಾಯಿತೋ ಅವತ್ತಿನಿಂದ ಸತತ 7 ಬಾರಿ ವಿಧಾನಸಭೆಗೆ ತೆರಳಿದ್ದಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಅವರಿಗೆ ಸೋಲೇ ಇರಲಿಲ್ಲ. ಯಾವ ಪಕ್ಷದಿಂದ ಸ್ಪರ್ಧಿಸಿದ್ದರೂ ಮತದಾರ ಅವರ ಕೈಬಿಡಲಿಲ್ಲ. ಹಾಗಾಗಿಯೇ ಇವರಿಗೆ ಸೋಲಿಲ್ಲದ ಸರದಾರ ಎಂಬ ಹೆಸರು ಬಂದಿತ್ತು.
ದ್ವಿತೀಯ ರ್ಯಾಂಕ್: ಲೋಕಸಭೆ ಚುನಾವಣೆಯಲ್ಲಿಯೂ ಮತದಾರ ಇವರ ಕೈ ಬಿಡಲಿಲ್ಲ. 5 ಬಾರಿ ಜಯಗಳಿಸಿದ್ದಾರೆ. ಚುನಾವಣಾ ಪರೀಕ್ಷೆಯ ಇತಿಹಾಸದಲ್ಲಿ ಬಂಗಾರಪ್ಪರಿಗೆ ಮೊದಲನೇ ರ್ಯಾಂಕ್. ಮತ್ತೊಬ್ಬ ಸೋಲಿಲ್ಲದ ಸರದಾರನೆಂದರೆ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, 1983ರಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ಆಯ್ಕೆ ಮಾಡಿಕೊಂಡ ರಾಜಕೀಯ ಕರ್ಮಭೂಮಿ ಜಿಲ್ಲೆಯ ಶಿಕಾರಿಪುರ ಕ್ಷೇತ್ರ. ಪಕ್ಷ ಸಂಘಟನೆ, ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದ ಯಡಿಯೂರಪ್ಪ ಅವರಿಗೆ ಶಿಕಾರಿಪುರದ ಮತದಾರ 6 ಬಾರಿ ಕೈ ಹಿಡಿದಿದ್ದಾನೆ.
 ಒಮ್ಮೆ ಮಾತ್ರ ಸೋಲು ಕಂಡಿದ್ದಾರೆ. ಇಂದಿಗೂ ಯಡಿಯೂರಪ್ಪ ಅವರ ಛಾಪು ಶಿಕಾರಿಪುರ ಕ್ಷೇತ್ರದಲ್ಲಿ ಅಜರಾಮರ. ಇವರಿಗೆ ಎರಡನೇ ರ್ಯಾಂಕ್.
ಮೀಸಲು ಕ್ಷೇತ್ರದ ಸರದಾರ: ಜಿಲ್ಲೆಯ ಮೀಸಲು ಕ್ಷೇತ್ರದ ಸರದಾರ ಜಿ. ಬಸವಣ್ಯಪ್ಪ. ಶಿಕಾರಿಪುರ ಮೀಸಲು ಕ್ಷೇತ್ರವಾಗಿದ್ದಾಗ 1962ರಲ್ಲಿ ಕಣಕ್ಕಿಳಿದು ಸೋಲುಂಡ ಬಸವಣ್ಣಪ್ಪ, ಅದೇ ಕ್ಷೇತ್ರದಿಂದ ಪುನಃ ಸ್ಪರ್ಧಿಸಿ ಗೆಲುವು ಕಂಡರು.
ನಂತರ ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಸತತ 4 ಬಾರಿ ಜಯಗಳಿಸಿದ ಅವರು, ತಮ್ಮ ರಾಜಕೀಯದ ಎರಡನೇ ಇನಿಂಗ್ಸ್‌ನ್ನು ಮತ್ತೆ ಕೆಜೆಪಿಯಿಂದ ಆರಂಭಿಸಿದ್ದಾರೆ.
  ರಾಜಕೀಯದಲ್ಲಿ ಹಿರಿಯರಾದ ಕರಿಯಣ್ಣ ಅವರು, 1985ರಲ್ಲಿ ಹೊಳೆಹೊನ್ನೂರು ಕ್ಷೇತ್ರದಲ್ಲಿ ಸೋಲುಕೊಂಡ ನಂತರ 89ರಲ್ಲಿ ಮತ್ತೆ ಅದೇ ಕ್ಷೇತ್ರದಲ್ಲಿ ಗೆಲುವಿನ ರುಚಿಕಂಡರು. ಆದರೆ 94ರಲ್ಲಿ ಸೋತರು. ಆದರೆ 99ರಲ್ಲಿ ಮತ್ತೆ ವಿಜಯ ಸಾಧಿಸಿದ ಅವರು 2 ಬಾರಿ ವಿಧಾನಸಭಾ ಸದಸ್ಯರಾಗಿದ್ದಾರೆ.
ಸಾಗರದಲ್ಲಿ: ಕಾಗೋಡು ಚಳುವಳಿ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಕಾಗೋಡು ತಿಮ್ಮಪ್ಪ ಸಾಗರ ವಿಧಾನಸಭಾ ಕ್ಷೇತ್ರವನ್ನು ತಮ್ಮ ರಾಜಕೀಯ ಕರ್ಮಭೂಮಿಯಾಗಿಸಿಕೊಂಡರು. ಮೊದಲ 2 ಚುನಾವಣೆಯಲ್ಲಿ ಸೋಲು ಕಂಡ ಅವರನ್ನು ನಂತರ ಸಾಗರ ಕೈ ಬಿಡಲಿಲ್ಲ.
   ನಿರಂತರವಾಗಿ 4 ಬಾರಿ ಗೆಲುವು ಸಾಧಿಸಿದರು. ಆದರೆ, 2004 ಹಾಗೂ 2008ರ ಚುನಾವಣೆಯಲ್ಲಿ ಅವರಿಗೆ ಕಹಿ ಅನುಭವ. ತಮ್ಮ ಸೋದರಳಿಯ ಬೇಳೂರು ಗೋಪಾಲಕೃಷ್ಣ ಅವರಿಂದಲೇ ಸೋಲುಂಡರು.
 ಶಾಂತವೇರಿ ಗೋಪಾಲಗೌಡ ಅವರು ಚುನಾವಣೆಗೆ ಸಮಾಜವಾದಿ ಪಕ್ಷದ ಮೂಲಕ ಎಂಟ್ರಿ ಕೋಟ್ಟಿದ್ದು 1952ರಲ್ಲಿ. ಮೊದಲ ಚುನಾವಣೆಯಲ್ಲಿ ಸಾಗರ- ಹೊಸನಗರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಅವರು, ನಂತರ ತೀರ್ಥಹಳ್ಳಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸತತ ಎರಡು ಬಾರಿ ಗೆಲುವುದರೊಂದಿಗೆ ಮೂರು ಬಾರಿ ವಿಧಾನಸಭೆ ಮೇಟ್ಟಿಲೇರಿದರು.
 ಬಳ್ಳಾರಿಯಿಂದ ಬಂದ ಕೆ.ಎಸ್. ಈಶ್ವರಪ್ಪ ಮೂಲತಃ ಆರ್‌ಎಸ್‌ಎಸ್ ಸಂಘಟನೆಯಿಂದ ಬಂದವರು. 1989ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಗೆಲುವು ಕಂಡರು.
 1999 ರಲ್ಲಿ ಸೋಲು ಕಂಡ ಅವರು, ಸತತ 4 ಬಾರಿ ವಿಧಾನಸಭೆಗೆ ಆಯ್ಕೆಯಾದರು.
ಹ್ಯಾಟ್ರಿಕ್ ಸೋಲು ಕಂಡ ನಾಯಕ: ಹ್ಯಾಟ್ರಿಕ್ ಸೋಲು ಅನುಭವಿಸಿದರೂ ಛಲಬಿಡದ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಹ್ಯಾಟ್ರಿಕ್ ಶಾಸಕರಾದರು. 1983, 85, 89ರ ಚುನಾವಣೆ ಕೈಕೊಟ್ಟಿತು.
    ಆದರೆ, 1994, 99, 2004ರ ಚುನಾವಣೆ ಗೆಲುವು ತಂದುಕೊಟ್ಟಿತು. ಆದರೆ, ಪುನಃ 2008ರಲ್ಲಿ ಸೋಲುಂಡರು. 2013ರ ಚುನಾವಣೆ ಅವರ ಪಾಲಿನ 8ನೇ ಚುನಾವಣೆ.
 ಅದೇ ರೀತಿ ಭದ್ರಾವತಿಯಲ್ಲಿ ಅತಿ ಹೆಚ್ಚು ಚುನಾವಣೆ (5) ಎದುರಿಸಿದ್ದು ಅಪ್ಪಾಜಿಗೌಡ.
  1989ರಲ್ಲಿ ಏಣಿಯ ಗುರುತಿನೊಂದಿಗೆ ರಾಜಕೀಯ ಪ್ರವೇಶ ಮಾಡಿದ ಅವರು ಸೋತರು, ನಂತರ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಪಡೆಯವಲ್ಲಿ ಯಶಸ್ವಿಯಾದ ಅಪ್ಪಾಜಿಗೌಡರಿಗೆ ಭದ್ರಾವತಿ ಎರಡು ಗೆಲುವು ನೀಡಿತು. ಇದೀಗ ಮತ್ತೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ.
  ಭದ್ರಾವತಿ ಮತ್ತೊಬ್ಬ ಎರಡು ಬಾರಿ ಗೆಲುವು ಕಂಡಿದ್ದು ಬಿ.ಕೆ. ಸಂಗಮೇಶ್. ಭದ್ರಾವತಿಯಲ್ಲಿ ಶಾಂತಿ ನೆಲೆಸಬೇಕು. ಅದಕ್ಕಾಗಿ ನನನ್ನು ಗೆಲಿಸಿ ಎನ್ನುತ್ತಲೇ ಸತತ ಎರಡು ಬಾರಿ (2004 ಮತ್ತು 2008ರಲ್ಲಿ) ವಿಧಾನಸಭೆಗೆ ಆಯ್ಕೆಯಾದರು.
 ಸಾರೇಕೊಪ್ಪ ಬಂಗಾರಪ್ಪ ಅವರ ಮೊದಲ ಪುತ್ರ ಕುಮಾರ್ ಬಂಗಾರಪ್ಪ ಅವರು ಅಪ್ಪನ ಹೆಸರಿನಿಂದಲೇ 1999ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಸತತ ಎರಡು ಬಾರಿ ಗೆದ್ದರು. ಹರತಾಳು ಹಾಲಪ್ಪ (2004, 2008), ಬೇಳೂರು ಗೋಪಾಲಕೃಷ್ಣ (2004, 2008)ರಲ್ಲಿ ವಿಜಯಿಗಳಾಗಿದ್ದು, ಇದೀಗ ಮತ್ತೆ ಚುನಾವಣೆ ಅಖಾಡಕ್ಕಿಳಿದಿದ್ದಾರೆ.
 -ಮೋಹನ್ ಕುಮಾರ್ ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement