ಪ್ರಕೃತಿ ಮುಂದೆ ಮಾನವ ಚಿಕ್ಕವ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.16
ಪ್ರಕೃತಿಯ ಮುಂದೆ ಮಾನವ ಬಹು ಚಿಕ್ಕವ. ಅಹಂಕಾರವನ್ನು ತೊರೆದು, ಎಲ್ಲರೊಡನೆ ಬಾಳುವುದನ್ನು ಪ್ರಕೃತಿಯಿಂದ ಕಲಿಯಬೇಕು. ಮಾನವ ಪ್ರಕೃತಿಯ ಕೂಸಾಗಿದ್ದಾನೆಂದು ಕುವೆಂಪು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಚ್.ಎಸ್. ಜಯ್ಯಣ್ಣ ಅವರು ಹೇಳಿದರು.
ಪ್ರಕೃತಿ ಮತ್ತು ಮಾನವರ ನಡುವೆ ಅವಿನಾಭಾವ ಸಂಬಂಧವಿದೆ. ಹಿಂದೆ ಪ್ರಕೃತಿಯನ್ನು ಆರಾಧಿಸುತ್ತಾ ಅಪಾರ ಅನುಭವಗಳೊಂದಿಗೆ ಆನಂದದಿಂದ ಬದುಕುತ್ತಿದ್ದವರು ಇಂದು ದುರಾಸೆಯಿಂದ ಪ್ರಕೃತಿಯ ಅಪಾರಶಕ್ತಿಯನ್ನು ದುರುಪಯೋಗ ಪಡಿಸಿಕೊಂಡ್ಡಿದ್ದರ ಫಲವಾಗಿ ಭೂಕಂಪ, ಸುನಾಮಿ, ಉಲ್ಕಾಪಾತ, ಜ್ವಾಲಾಮುಖಿ, ಕಾಡ್ಗಿಚ್ಚು, ಹಿಮಪರ್ವತ ಸುರಿತ, ಬರಗಾಲ, ಚಂಡಮಾರುತ ಮೊದಲಾದ ಪ್ರಕೃತಿ ವಿಕೋಪಗಳು ಮತ್ತು ಮಾನವ ನಿರ್ಮಿತವಾದ ಅಣುವಿದ್ಯುತ್ ದುರಂತ, ವಾಹನಗಳ ಅಪಘಾತ, ಕಾಡಿನ ನಾಶ, ಪರಿಸರ ಮಾಲಿನ್ಯ ಮೊದಲಾದ ವಿಕೋಪಗಳನ್ನು ಅನುಭವಿಸುವಂತಹ ದುಸ್ಥಿತಿ ಒದಗಿದೆ ಎಂದರು.
ದುರಾಸೆ ಬೇಡ: ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದ ಸಾಹಿತ್ಯ ಸಂಘವು ಏರ್ಪಡಿಸಿದ್ದ 'ಪ್ರಕೃತಿ ವಿಕೋಪದ ತಲ್ಲಣಗಳು' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಪ್ರಕೃತಿಯ ವಿಕೋಪಗಳು ನೋಡಿ, ಕೇಳಿ, ತಿಳಿದುಕೊಂಡಾದರೂ, ನಮ್ಮ ದುರಾಸೆಗಳಿಂದ ದೂರವಿರಬೇಕೆಂದು ತಿಳಿಸಿದರು. ವಿವಿಧ ವಿಕೋಪಗಳ ಕಾರಣ ಮತ್ತು ಪರಿಣಾಮಗಳನ್ನು ಭಾವಚಿತ್ರ ಮತ್ತು ಸಾಕ್ಷ್ಯ ಚಿತ್ರಗಳ ಮೂಲಕ ಮನವರಿಕೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ, ಸಾಹಿತ್ಯವನ್ನು ಇಂದು ಅಂತರ್ ಶಿಸ್ತಿನ ಅಧ್ಯಯನದ ಮೂಲಕ ಅರ್ಥೈಸಿಕೊಳ್ಳುವ ಅಗತ್ಯವಿದೆ. ಪ್ರಕೃತಿಯನ್ನು ಸರಿಯಾಗಿ ತಿಳಿದುಕೊಂಡು ಬದುಕಬೇಕು. ಪರಿಸರ ಮಾಲಿನ್ಯವನ್ನು ತಡೆಗಟ್ಟಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ಸಾಹಿತ್ಯ ಸಂಘದ ಉಪಾಧ್ಯಕ್ಷ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸ್ವಾಗತಿಸಿದರು. ಪಿ. ಪ್ರತಿಭಾ ಮತ್ತು ಎನ್.ಬಿ. ವಿದ್ಯಾಶ್ರೀ ನಿರೂಪಿಸಿದರು. ಸಿ.ಎಂ. ರಾಣಿ ವಂದಿಸಿದರು.