ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಈಶ್ವರಪ್ಪನವರಿಗೆ ಅಕ್ರಮ ಹಣವೇ ಪ್ರತಿಸ್ಪರ್ಧಿ'

Lingaraj Badiger
Updated On : 18 Apr 2013, 11:01 am

ಶಿವಮೊಗ್ಗ: ನೋಟು ಎಣಿಸುವ ಯಂತ್ರದಲ್ಲಿ ಲೆಕ್ಕ ಮಾಡಿದ ನೋಟಿನ ಕಟ್ಟುಗಳಿಂದ ಈಶ್ವರಪ್ಪ ಈ ಬಾರಿಯ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂದು ಕೆಜೆಪಿ ಟೀಕಿಸಿದೆ.
 ಅಕ್ರಮವಾಗಿ ಸಂಪಾದಿಸಿದ ಹಣದಿಂದ ಚುನಾವಣೆ ಸ್ಪರ್ಧಿಸುತ್ತಿರುವ ಕೆ.ಎಸ್. ಈಶ್ವರಪ್ಪ, ತಮಗೆ ಪ್ರತಿ ಸ್ಪರ್ಧಿ ಯಾರು ಇಲ್ಲ ಎಂದು ಹೇಳಿಕೆ ನೀಡುತ್ತಿರುವುದು ಸರಿಯಷ್ಟೇ. ಹಣದಿಂದ ರಾಜಕೀಯ ಮಾಡುವ ಈಶ್ವರಪ್ಪ ಪ್ರಕಾರ ಅವರಿಗೆ ಪ್ರತಿಸ್ಪರ್ಧಿ ಎಂದರೆ ಅಕ್ರಮವಾಗಿ ಸಂಪಾದಿಸಿದ ಹಣ ಮಾತ್ರ ಎಂದು ಕೆಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪುರುಷೋತ್ತಮ್ ಹೇಳಿದ್ದಾರೆ.
ತೀವ್ರ ಪೈಪೋಟಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸವನ್ನು ವಿರೋಧಿಸಿ, ಪ್ರಗತಿ ಪರಿಶೀಲನಾ ಸಭೆಗಳಿಗೆ ಗೈರು ಹಾಜರಾಗುತ್ತಿದ್ದ ಕೆ.ಎಸ್. ಈಶ್ವರಪ್ಪ ಹಾಗೂ ಪ್ರಾಮಾಣಿಕ ರಾಜಕಾರಣಿ ಎಸ್. ರುದ್ರೇಗೌಡ ಅವರ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎಂದು  ಹೇಳಿದರು.
ವಿರೋಧಿಸುತ್ತಿದ್ದರು: ಬಿ.ಎಸ್. ಯಡಿಯೂರಪ್ಪನವರ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಪಡಿಸುತ್ತ, ಬಿಡುಗಡೆಯಾದ ಅನುದಾನ, ಯೋಜನೆಗಳನ್ನು ಕಡೆಗಣಿಸುವ ಮೂಲಕ ಯಡಿಯೂರಪ್ಪ ಅವರನ್ನು ವೈಯಕ್ತಿಕವಾಗಿ ವಿರೋಧಿಸುತ್ತಿದ್ದರು. ಆದರೂ ಯಡಿಯೂರಪ್ಪ ಅವರು ಕೋಟ್ಯಂತರ ರುಪಾಯಿ ಯೋಜನೆಗಳನ್ನು ಶಿವಮೊಗ್ಗ ಜಿಲ್ಲೆಗೆ ಹಾಗೂ ನಗರಕ್ಕೆ ಬಿಡುಗಡೆ ಮಾಡಿದ್ದಾರೆ ಎಂದರು.
ಪ್ರಚಾರ: ಕೆಜೆಪಿಯಿಂದ ಸ್ಪರ್ಧಿಸಿದ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳಿಗೆ ಈಗಾಗಲೇ ಬಿ ಫಾರಂ ನೀಡಲಾಗಿದ್ದು, ಪ್ರತಿ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳು ಬೂತ್ ಮಟ್ಟದಲ್ಲಿ ಹಾಗೂ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಬಿ.ಎಸ್. ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ ಎಂದರು.
 ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಎಸ್. ರುದ್ರೇಗೌಡ ಅವರು ಈಗಾಗಲೇ ನಗರದ 32 ವಾರ್ಡ್‌ಗಳಲ್ಲಿಯೂ ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದಾರೆ. ಪ್ರತಿ ವಾರ್ಡ್‌ಗಳಲ್ಲಿಯೂ ಮಹಿಳಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಘಟಕಗಳು ಈಗಾಗಲೇ ನಿರಂತರವಾಗಿ ಪ್ರಚಾರದಲ್ಲಿ ನಿರತವಾಗಿವೆ ಎಂದರು.
ಪಕ್ಷಕ್ಕೆ ಸೇರ್ಪಡೆ: ಇನ್ನೂ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ 217 ಬೂತ್‌ಗಳಲ್ಲಿ ಪ್ರಚಾರ ಸಮಿತಿಗಳನ್ನು ರಚಿಸಲಾಗಿದ್ದು, ಜಿ. ಬಸವಣ್ಯಪ್ಪ ಅವರು ಉತ್ತಮವಾಗಿ ಪ್ರಚಾರ ಮಾಡುತ್ತಿದ್ದಾರೆ. ಏಪ್ರಿಲ್ 21ರೊಳಗೆ ತಮ್ಮ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಿ ಮೊದಲ ಹಂತದ ಪ್ರಚಾರ ಮುಕ್ತಾಯಗೊಳಿಸಲಿದ್ದು, ಏಪ್ರಿಲ್ 22 ರಿಂದ ಎರಡನೇ ಹಂತದ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬಣಜಾರ್ ಸಮುದಾಯ ಕೆಜೆಪಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ ಎಂದು ತಿಳಿಸಿದರು.
 ಇದೇ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಣಜಾರ್ ಸಮುದಾಯದ ಮಾಜಿ ಎಪಿಎಂಸಿ ಉಪಾಧ್ಯಕ್ಷ ನಾನ್ಯಾನಾಯ್ಕ, ಜಿಲ್ಲಾ ಬಣಜಾರ್ ಸಮಾಜದ ಅಧ್ಯಕ್ಷ ಭೋಜನಾಯ್ಕ, ಕುಂಚೇನಹಳ್ಳಿ ಗ್ರಾಪಂ ಅಧ್ಯಕ್ಷ ವಾಲ್ಯಾನಾಯ್ಕ, ಮಾಜಿ ಅಧ್ಯಕ್ಷ ನಾಗೇಶ್ ನಾಯ್ಕ, ಮಾಜಿ ಕೆಎಂಎಫ್ ಸದಸ್ಯ ಪಾಪಾನಾಯ್ಕ ಸೇರಿದಂತೆ ನೂರಾರು ಮುಖಂಡರು ಕೆಜೆಪಿಗೆ ಸೇರ್ಪಡೆಗೊಂಡರು.
 ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಮಹಿಳಾ ಘಟಕದ ನಗರಾಧ್ಯಕ್ಷೆ ಮಾಲತಿ ಶೇಖರ್, ಗ್ರಾಮಾಂತರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಾಮಚಂದ್ರ, ಎಸ್. ಹಾಲಸ್ವಾಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement