ಎಚ್.ಟಿ ಬಳಿಗಾರ್‌ರನ್ನು ಗೆಲ್ಲಿಸಲು ಮಧು ಮನವಿ
ಕ.ಪ್ರ ವಾರ್ತೆ, ಶಿಕಾರಿಪುರ, ಏ.17
ಕಿರಣ್ ಟಾಕೀಸ್ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಬೃಹತ್ ಪ್ರಚಾರ ಸಭೆಯಲ್ಲಿ ರಾಜ್ಯ ಯುವ ಘಟಕದ ಅದ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಸೋಲಿಲ್ಲದ ಸರದಾರನಾಗಿ ಕಡೆ ಅವಧಿಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿದ್ದ ಬಂಗಾರಪ್ಪ ಬರಗಾಲದಲ್ಲಿ ಉಚಿತವಾಗಿ ಅಕ್ಕಿ, ಬಿತ್ತನೆ ಬೀಜ, ಗೊಬ್ಬರ ವಿತರಿಸಿದರೂ ಸೋಲಿನ ರುಚಿಯನ್ನು ಕ್ಷೇತ್ರದ ಜನತೆ ತೋರಿಸಿದರು. ಬಂಗಾರಪ್ಪನವರ ಋಣ ತೀರಿಸಲು ಈ ಬಾರಿ ಅವರ ಮಗ ಎಂಬ ಮಮಕಾರ ಹೊಂದಿದ್ದ ಎಚ್.ಟಿ ಬಳಿಗಾರ್‌ರನ್ನು ಜಯ ಗಳಿಸುವಂತೆ ಮಾಡುವ ಮೂಲಕ ಋಣ ತೀರಿಸಲು ಮನವಿ ಮಾಡಿದರು.
ಬಂಗಾರಪ್ಪನವರಿಗೆ ಕೇವಲ ಸೊರಬ ಮಾತ್ರ ರಾಜಕೀಯವಾಗಿ ಶಕ್ತಿ ನೀಡದೆ ಸಂಸದ ಸ್ಥಾನಕ್ಕೆ ಸ್ಪರ್ದಿಸಿದ್ದ ಸಂದರ್ಭ 13 ಸಾವಿರ ಹೆಚ್ಚು ಮತ ನೀಡುವ ಮೂಲಕ ಶಿಕಾರಿಪುರ ಜನತೆ ಗೆಲ್ಲಿಸಿ ರಾಷ್ಟ್ರಮಟ್ಟದ ನಾಯಕರಾಗಲು ಕಾರಣರಾಗಿದ್ದಾರೆ. ಇದರೊಂದಿಗೆ ಮಹಾಲಿಂಗಪ್ಪ ಶಾಸಕರಾಗಲು ಹಾಗೂ ನಗರದ ಮಹಾದೇವಪ್ಪ ಅತಿ ಕಡಿಮೆ ಅಂತರದಲ್ಲಿ ಪರಾಭವಗೊಂಡ ಸಂದರ್ಭ ಬಂಗಾರಪ್ಪ ಪ್ರಭಾವ ಕಾರಣವಾಗಿದೆ ಎಂದರು.
ಹಲವರು ಬಂಗಾರಪ್ಪ ಮನೆಯಲ್ಲಿ ಕೊಳ್ಳೆ ಹೊಡೆದು ಇದೀಗ ಬೇರೆಡೆಗೆ ಕೊಳ್ಳೆ ಹೊಡೆಯಲು ಹೋಗಿದ್ದಾರೆ ಎಂದು ಬಿಎಸ್ಸಾರ್ ಅಭ್ಯರ್ಥಿ ಫಕೀರಪ್ಪರ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದರು.
ಪ್ರಣಾಳಿಕೆ ಘೋಷಣೆ: ತಾಲೂಕಿನ ಈಸೂರು ಗ್ರಾಮದ 225 ಸಾಗುವಳಿದಾರರನ್ನು ಬಳ್ಳಾರಿ ಜೈಲಿಗೆ ಯಡಿಯೂರಪ್ಪ ಕಳುಹಿಸಿದ್ದು ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಶಾಶ್ವತ ಪರಿಹಾರ ದೊರಕಿಸುವುದಾಗಿ ತಿಳಿಸಿದರು. ರೈತರ ಸಂಪೂರ್ಣ ಸಾಲಮನ್ನಾ, ದಿನಪೂರ್ತಿ ಉಚಿತ ವಿದ್ಯುತ್ ಪ್ರಣಾಳಿಕೆಯಲ್ಲಿ ಘೋಷಿಸಿರುವುದಾಗಿ ತಿಳಿಸಿದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ದೇಶದಲ್ಲಿ ಬರಗಾಲ, ಅನಾಹುತವಾದಾಗ ಕಣ್ಣೀರಿಡುವ ಜನಪ್ರತಿನಿಧಿಗಳನ್ನು ಕಂಡಿದ್ದು ಯಡಿಯೂರಪ್ಪ ತಮ್ಮ ಹಾಗೂ ಶೋಭಾ ಅಧಿಕಾರ ಕಳೆದುಕೊಂಡಾಗ ಕಣ್ಣೀರು ಹರಿಸಿದರು ಎಂದು ಅಪಹಾಸ್ಯ ಮಾಡಿದರು.
ಅಭ್ಯರ್ಥಿ ಹೊಳೆಬಸಪ್ಪ ಬಳಿಗಾರ್ ಮಾತನಾಡಿ, ತಾಲೂಕಿನ ಬಡ ಜನರ ಕಣ್ಣೀರು ಒರೆಸಲು ದೂರದಿಂದ ಬಂದ ಯಡಿಯೂರಪ್ಪ ಮುಗ್ಧ ಜನತೆಯನ್ನು ಮೋಡಿ ಮಾಡಿ ಫಲವತ್ತಾದ ರಾಜಕೀಯ ಭೂಮಿ ಎಂದು ಫಲವನ್ನು ಪಡೆದ ವ್ಯಕ್ತಿ ಎಂದು ಟೀಕಿಸಿದರು.
ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಪ್ಪ ಮತ್ತು ಬೆಂಬಲಿಗರು ಜೆಡಿಎಸ್ ಸೇರ್ಪಡೆಗೊಂಡರು.
ತನ್ವೀರ್ ಸೇಠ್, ಅಧ್ಯಕ್ಷ ನಾಗನಗೌಡ ಪಾಟೀಲ, ಬಿಳಕಿ ನಾಗರಾಜಗೌಡ, ಜಯಾನಾಯ್ಕ, ಗಜೇಂದ್ರ, ಮೇರಿಯಮ್ಮ, ರಶೀದಾಬಾನು, ಮಕ್ಬೂಲ್ ಅಲಿ, ಜಿಯಾ ಉಲ್ಲಾ, ಮಾರವಳ್ಳಿ ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.