ಜೆಡಿಎಸ್ನಿಂದ ಬಳಿಗಾರ್, ಕೆಜೆಪಿಯಿಂದ ಕೊಪ್ಪಲು ನಾಮಪತ್ರ
ಕ.ಪ್ರ ವಾರ್ತೆ, ಶಿಕಾರಿಪುರ, ಏ.17
ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಬುಧವಾರ ಜಾತ್ಯತೀತ ಜನತಾದಳದಿಂದ ಹೊಳೆಬಸಪ್ಪ ಬಳಿಗಾರ್ ಹಾಗೂ ಬಿಜೆಪಿಯಿಂದ ಮಂಜುನಾಥ್ ಕೊಪ್ಪಲು ನಾಮಪತ್ರ ಸಲ್ಲಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ.
ಬುಧವಾರ ಪಟ್ಟಣದ ಆರಾಧ್ಯದೈವ ಹುಚ್ಚೂರಾಯನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರದಲ್ಲಿ ತಮ್ಮ ಅಸಂಖ್ಯಾತ ಬೆಂಬಲಿಗರ ಜತೆ ರಥ ಬೀದಿ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ನಂತರದಲ್ಲಿ ಆಗಮಿಸಿದ್ದ ಹಲವು ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಜಿಲ್ಲಾಧ್ಯಕ್ಷ ಸಿದ್ರಾಮಣ್ಣ ಮಾತನಾಡಿ, ಶಿಕಾರಿಪುರ 1983ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿದೆ. ಆದರೆ ಇದೀಗ ಹಲವು ವ್ಯತ್ಯಾಸವಾಗಿದೆ ಎಂದರು.
ಅಧಿಕ ಸ್ಥಾನ ಗಳಿಸಲು ತಪ್ಪು: ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವ ತವಕದಲ್ಲಿ 110 ಸ್ಥಾನ ಗಳಿಸಿದ್ದ ಪಕ್ಷ ಸ್ಪಷ್ಟ ಬಹುಮತಕ್ಕಾಗಿ ಕೇವಲ 3 ಅಧಿಕ ಸ್ಥಾನ ಗಳಿಸಿಕೊಳ್ಳಲು ಹಲವು ತಪ್ಪುಗಳನ್ನು ಮಾಡಬೇಕಾಯಿತು ಎಂದರು.
ಮುಖಂಡ ಪದ್ಮನಾಭ ಭಟ್ ಮಾತನಾಡಿ, ದೀನದಯಾಳ ಉಪಾಧ್ಯಾಯ, ವಾಜಪೇಯಿ, ಮುರುಳಿ ಮನೋಹರ ಜೋಷಿ, ಆದ್ವಾನಿ ಮತ್ತಿತರ ಹಿರಿಯ ಮುಖಂಡರು ಕಟ್ಟಿದ ಪಕ್ಷವನ್ನು ಇಂದು ನಾನು ಕಟ್ಟಿದ ಪಕ್ಷ,ನಾನಿಲ್ಲದೆ ಪಕ್ಷವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಬ್ಬರಿಸುತ್ತಿದ್ದಾರೆ. ಕೇವಲ ಚಟ, ಸ್ವಾರ್ಥಕ್ಕಾಗಿ ಸ್ಥಾಪಿಸದೆ ದೇಶದ ಭವಿಷ್ಯದ ಉನ್ನತ ಚಿಂತನೆಯ ಕಲ್ಪನೆಯನ್ನು ಹೊಂದಿ ಕಟ್ಟಲಾದ ಪಕ್ಷವನ್ನು ತ್ಯಜಿಸಿದ ಮಾತ್ರದಿಂದ ಅವನತಿ ಅಸಾಧ್ಯ. ದೇಶದ ಮೂಲೆ, ಮೂಲೆಯ ರಾಜ್ಯ, ಗ್ರಾಮಗಳಲ್ಲಿ ಇಂದಿಗೂ ಪಕ್ಷ ಸದೃಢವಾಗಿದೆ ಎಂದರು.
ಜಿಪಂ ಸದಸ್ಯ ದಾನಿ ರುದ್ರಪ್ಪ, ಕಲ್ಲಪ್ಪ, ಮುಖಂಡ ಜಯಣ್ಣ, ಹುಚ್ರಾಯಪ್ಪ, ತ್ಯಾಗರ್ತಿ ನೀಲಪ್ಪ, ಸುರೇಶ್ ಬೇವೂರು, ಗಿರೀಶ್ ಧಾರವಾಡದ, ಸಂಗಮೇಶ್, ಶಿವರಾಜ್ ಇದ್ದರು.