ಪಕ್ಷೇತರರಾಗಿ ಸಂಗಮೇಶ್ವರ
ಕ.ಪ್ರ.ವಾರ್ತೆ, ಭದ್ರಾವತಿ, ಏ.17 ಭದ್ರಾವತಿಯಲ್ಲಿ ಕಾಂಗ್ರೆಸ್ ನಶಿಸಿಹೋಗುವ ಸಂದರ್ಭದಲ್ಲಿ ಅದನ್ನು ಎತ್ತಿ ಹಿಡಿದು ಪಕ್ಷ ಸಂಘಟನೆಗೆ 2 ದಶಕದಿಂದ ಶ್ರಮಿಸಿದ ತಮಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ದೂರಿದ್ದಾರೆ.
ಬುಧವಾರ ಕಾಂಗ್ರೆಸ್ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ಸಂಗಮೇಶ್ವರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
2004ರಲ್ಲಿ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿಯವರು ತಮಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಡುವ ಆಮಿಷ ಒಡ್ಡಿದಾಗ, 2008 ರಲ್ಲಿ ಯಡ್ಯೂರಪ್ಪನವರ ಆಪರೇಶನ್ ಕಮಲದ ಆಮಿಷ ಎದುರಾದಾಗ ಅವನ್ನು ತಿರಸ್ಕರಿಸಿ ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತನಾಗಿ ಉಳಿತ ತಮಗೆ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ವಂಚಿಸಿದ್ದಾರೆ ಎಂದು ಆಪಾದಿಸಿದರು.
ಅಭಿವೃದ್ಧಿ ಬಗ್ಗೆ ಏಕೆ ಚಿಂತಿಸಿಲ್ಲ: ಇಬ್ರಾಹಿಂ ಭದ್ರಾವತಿ ಮನೆಮಗ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರು ಕೇಂದ್ರ ಸಚಿವರಾಗಿದ್ದಾಗ ಭದ್ರಾವತಿ ಅಭಿವೃದ್ಧಿ ಬಗ್ಗೆ ಏಕೆ ಚಿಂತನೆ ಮಾಡಲಿಲ್ಲ. ಈಗ ತಮಗೆ ಟಿಕೆಟ್ ಸಿಗುವ ಸಮಯದಲ್ಲಿ ಹಿಂದೆಂದೂ ಕಾಣದ ರಕ್ಷಣಾ ವ್ಯವಸ್ಥೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಭದ್ರಾವತಿಯನ್ನು ಇಷ್ಟು ವರ್ಷ ಮಗೆ ಗುತ್ತಿಗೆ ನೀಡಿದ್ದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಭದ್ರಾವತಿ ಇವರ ಅಪ್ಪನ ಮನೆ ಸ್ವತ್ತಲ್ಲ ಗುತ್ತಿಗೆ ನೀಡಲು ಎಂದು ಸಂಗಮೇಶ್ವರ್ ಪ್ರತಿಕ್ರಿಯಿಸಿದರು.
ಇಬ್ರಾಹಿಂ ಮಾಡಬಾರದ ಕೆಲಸ ಮಾಡಿ ಹಣ ಸಂಪಾದಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ನ ಬಿಫಾರಂ ಕೊಡಿಸುವ ಆಶ್ವಾಸನೆ ನೀಡಿ ಹಲವರಿಂದ ಅವರು ಹಣ ಪಡೆದಿದ್ದಾರೆ ಎಂದು ಸಂಗಮೇಶ್ವರ್ ಆರೋಪಿಸಿದರು.
ತಮ್ಮ ಮತ್ತು ಇಬ್ರಾಹಿಂ ನಡುವೆ ಇರುವ ಸಮರದಲ್ಲಿ ಜಯದ ಕನಸನ್ನು ಜೆಡಿಎಸ್ನ ಅಪ್ಪಾಜಿ ಕಾಣುವ ಅಗತ್ಯವಿಲ್ಲ. ಏಕೆಂದರೆ ಅವರು ರಿಜಕ್ಟೆಡ್ ಗೂಡ್ಸ್ ಇದ್ದಹಾಗೆ. ಇಬ್ಬರ ಜಗಳ ಮೂರನೆಯವರಿಗೆ ಲಾಭವಂತೂ ಆಗದು ಎಂದು ಅವರು ತಿಳಿಸಿದರು.