ಯಡಿಯೂರಪ್ಪನವರೇ, ನೀವು ಮಾತ್ರ ವೀರಶೈವ ನಾಯಕರೆ?
ಶಿವಮೊಗ್ಗ: ನೀವು ಮಾತ್ರ ವೀರಶೈವ ನಾಯಕರೇ, ಬೇರೆ ಯಾರು ಮುಖ್ಯಮಂತ್ರಿಯಾಗಬಾರದೇ ಎಂದು ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಬಿಎಸ್ ಯಡಿಯೂರಪ್ಪರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್. ಈಶ್ವರಪ್ಪ ನಾಮಪತ್ರ ಸಲ್ಲಿಸಿದ ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವ ಸಮಾಜದಲ್ಲಿ ಬೇರೆ ಯಾರು ನಾಯಕರೇ ಇಲ್ಲ ಎಂದುಕೊಂಡಿದ್ದಾರೆ ಅವರು(ಬಿಎಸ್ವೈ). ಜಗದೀಶ್ ಶೆಟ್ಟರ್ ಸಿಎಂ ಆಗಬಾರದೇ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯೊಟ್ಟಿಗಿದ್ದಾರೆ: ತಮ್ಮೊಟ್ಟಿಗೆ ಯಾರು ಬರುವುದಿಲ್ಲವೋ ಅವರೆಲ್ಲಾ ದ್ರೋಹಿಗಳೆಂದು ಬಿಎಸ್ವೈ ಹೇಳುತ್ತಾರೆ, ಎಲ್ಲಾ ಲಿಂಗಾಯಿತ ನಾಯಕರು ತಮ್ಮೊಟ್ಟಿಗೆ ಬರುತ್ತಾರೆಂದು ಹೇಳಿದ್ದರು. ಯಾರು ಅವರೊಟ್ಟಿಗೆ ಹೋದರು, ಎಲ್ಲರೂ ಬಿಜೆಪಿಯೊಟ್ಟಿಗಿದ್ದಾರೆ. ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರು ಸೇರಿ 26 ಎಂಪಿಗಳೂ ಅವರೊಟ್ಟಿಗಿದ್ದರು. ಆದರೆ, ಈಗ ಇರುವುದು ಇಬ್ಬರು ಅರ್ಧನಾರೀಶ್ವರರು ಮಾತ್ರ. ಒಬ್ಬರು ಪುತ್ರ ರಾಘವೇಂದ್ರ, ಮತ್ತೊಬ್ಬರು ಶಿವಕುಮಾರ ಉದಾಸಿ. ಈಗಲಾದರೂ ಅರಿವಾಯಿತಾ ಯಡಿಯೂರಪ್ಪ ಎಂದು ವ್ಯಂಗ್ಯವಾಡಿ ಬಿಎಸ್ವೈ ಅವರನ್ನು ಕುಟುಕಿದರು.
ತಕ್ಕ ಉತ್ತರ: ಬಿ.ಎಸ್. ಯಡಿಯೂರಪ್ಪ ಈಶ್ವರಪ್ಪ ಗೆದ್ದುಬರಲಿ ಎಂದು ಸವಾಲು ಹಾಕಿದ್ದಾರೆ, ಈ ಸವಾಲಿಗೆ ಮೇ 5ರಂದು ಮತದಾರರು ತಕ್ಕ ಉತ್ತರ ಕೊಡುತ್ತಾರೆ ಎಂದು ಟೀಕಿಸಿದರು. ಕಾಂಗ್ರೆಸ್ ನಾಯಕರು ಯಡಿಯೂರಪ್ಪನವರ ಹೆಗಲ ಮೇಲೆ ಬಂದೂಕನ್ನಿಟ್ಟು ಬಿಜೆಪಿ ಕಡೆ ಗುಂಡು ಹಾರಿಸಲು ಸೂಚನೆ ನೀಡಿದ್ದಾರೆ. ಗುಂಡು ಹಾರಿಸದಿದ್ದಲ್ಲಿ ಸಿಬಿಐ ಬಲೆಗೆ ಬೀಳಿಸುವುದಾಗಿ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿಯೇ ಒತ್ತಡಕ್ಕೆ ಮಣಿದು ಬಿಎಸ್ವೈ ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ವಿದೇಶಿ ಮಹಿಳೆ: ವಿಧಾನ ಪರಿಷತ್ ಸದಸ್ಯ ಪಿ.ವಿ. ಕೃಷ್ಣಭಟ್ ಮಾತನಾಡಿ, ಕಾಂಗ್ರೆಸ್ನ ಈಗಿನ ಸ್ಥಿತಿ ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಪರಕೀಯ ಮಹಿಳೆಗೆ ದೇಶದ ಆಡಳಿತವನ್ನು ವಹಿಸಿಕೊಡಲಾಗಿದ್ದು, ಸೋನಿಯಾಗಾಂಧಿಯವರ ಇಬ್ಬರು ಸಹೋದರಿಯರು 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಹದಿನೆಂದು ಕೋಟಿ ರುಪಾಯಿ ಲಂಚ ಸಂದಾಯವಾಗಿದೆ. ಆದರೆ, ಈ ಕುರಿತು ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.
ಕುಟುಂಬ ನಿಷ್ಠೆ: ಬಿ.ಎಸ್. ಯಡಿಯೂರಪ್ಪ ಪಕ್ಷ ಬೆಳೆಸಿದ್ದಾರೆ, ಅದನ್ನು ಮೆಚ್ಚಬೇಕು. ದುರ್ದೈವದ ಸಂಗತಿ ಎಂದರೆ ಅಧಿಕಾರ, ಹಣ ಬಂದಾಗ ವಿವೇಕ ಕಳೆದುಕೊಂಡು ಕೆಲವರು ಭ್ರಷ್ಟರಾಗುತ್ತಾರೆ. ಬಿಎಸ್ವೈ ಕೂಡ ಹಾಗೆ ಆದರು. ಮುಖ್ಯಮಂತ್ರಿಯಾದ ನಂತರ ಅವರಲ್ಲಿದ್ದ ಪಕ್ಷ ನಿಷ್ಠೆ ಹೋಗಿ ಸ್ವಂತ ಹಾಗೂ ಕುಟುಂಬ ನಿಷ್ಠೆ ಹೆಚ್ಚಾಯಿತು ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಚಿವ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಮುಖಂಡರಾದ ಗಿರೀಶ್ ಪಟೇಲ್, ದತ್ತಾತ್ರಿ, ಚನ್ನಬಸಪ್ಪ ಇದ್ದರು.