ಉರುಳಿನಲ್ಲಿ ಸಿಲುಕ್ಕಿದ್ದ ಚಿರತೆ ಪಾರು
ಕ.ಪ್ರ.ವಾರ್ತೆ,ಸಾಗರ, ಏ.18
ತಾಲೂಕಿನ ತ್ಯಾಗರ್ತಿ ಸಮೀಪದ ಮಂಚಾಲೆ ಮಾರ್ಗದಲ್ಲಿನ ಕಾರೆಹೊಂಡ- ದೊಡ್ಡಬೈಲು ಗ್ರಾಮದ ಕಾಡಿನಲ್ಲಿ ಕಾಡುಹಂದಿಗಳ ಹಾವಳಿ ನಿಯಂತ್ರಣಕ್ಕೆ ನಿರ್ಮಿಸಲಾಗಿದ್ದ ಉರುಳಿನಲ್ಲಿ ಸಿಲುಕಿಕೊಂಡಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದು ಶಿವಮೊಗ್ಗದ ತಾವರೆಕೊಪ್ಪ ಸಿಂಹಧಾಮಕ್ಕೆ ಸಾಗಿಸಿದ ಘಟನೆ ಗುರುವಾರ ನಡೆಸಿದೆ.
ಗ್ರಾಮದ ಕಾಡಿನಲ್ಲಿ ಕಾಡುಹಂದಿಗಳ ನಿಯಂತ್ರಣಕ್ಕೆ ನಿರ್ಮಿಸಲಾಗಿದ್ದ ಉರುಳಿನಲ್ಲಿ ಬೃಹತ್ ಚಿರತೆ ಸಿಲುಕಿಕೊಂಡಿತ್ತು. ಉರುಳು ಕೊರಳಿನ ಬದಲಿಗೆ ಹೊಟ್ಟೆ-ಎದೆಭಾಗ ಸಿಲುಕಿರುವ ಕಾರಣ ಚಿರತೆ ಪಾರಾಗಲು ಸಾಧ್ಯವಾಗದಿದ್ದರೂ ಪ್ರಾಣಾಪಾಯದಿಂದ ಪಾರಾಗಿದೆ.
ಉರುಳಿನಲ್ಲಿ ಸಿಲುಕಿಕೊಂಡ ಚಿರತೆ ತಪ್ಪಿಸಿಕೊಳ್ಳಲು ಕಿರುಚಾಡಿ ಕೊಸರಾಡುವಾಗ ಗ್ರಾಮದ ಕೆಲವರು ನೋಡಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸಾಗರ ಉಪ ಅರಣ್ಯ ಉಪಸಂರಕ್ಷಣಾಧಿಕಾರಿ ಮೋಹನ ಗಂಗೊಳ್ಳಿ ಮತ್ತು ಆರ್ಎಫ್ಓ ರಾಮಕೃಷ್ಣಪ್ಪ ಹಾಗೂ ಸಹಾಯಕ ನಿರ್ದೇಶಕ ಡಾ. ಚಂದ್ರಶೇಖರ ವನ್ಯಜೀವಿ ವಿಭಾಗ ಹಾಗೂ ಪಶುವೈದ್ಯಾಧಿಕಾರಿ ಡಾ. ದಯಾನಂದ, ಸಾಗರ ಗ್ರಾಮಾಂತರ ಎ.ಎಸ್.ಐ. ಅಣ್ಣಯ್ಯ ಮತ್ತು ಪಾರೆಸ್ಟರ್ ಹಾಗೂ ಗಾಡರ್ ಮತ್ತು ವಿವಿಧ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಅರವಳಿಕೆ ನೀಡಿ ಚಿರತೆಯ ಜ್ಞಾನತಪ್ಪಿಸಿ ಬಲೆಯಲ್ಲಿ ಬಂಧಿಸಿ ಸೂಕ್ತ ಜಾಲರಿ ನಿರ್ಮಿತ ವಾಹನಕ್ಕೆ ಏರಿಸಿ ತಾವರೆಕೊಪ್ಪದತ್ತ ಸಾಗಿಸಿದರು.