ಶ್ರೀಮಠದಲ್ಲಿ ಹಸ್ತಿ ದಂತ ಸಿಂಹಾಸನ ಪ್ರದರ್ಶನ
ಕ.ಪ್ರ.ವಾರ್ತೆ, ಹೊಸನಗರ, ಏ.18
ವಿಶ್ವದ ಏಕೈಕ ಮತ್ತು ಅಪರೂಪದ ವಸ್ತು ಎಂದೆ ಬಿಂಬಿತವಾಗಿರುವ ಹಸ್ತಿ ದಂತ ಸಿಂಹಾಸನವನ್ನು ಶ್ರೀ ರಾಮಚಂದ್ರಾಪುರಮಠದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಶ್ರೀಮಠದಲ್ಲಿ ರಾಮೋತ್ಸವ ನಡೆಯುತ್ತಿದ್ದು ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಭಕ್ತರ ಒತ್ತಾಸೆ ಮತ್ತು ರಾಘವೇಶ್ವರ ಶ್ರೀಗಳ ಆದೇಶದಂತೆ ಏ.18ರಂದು ಪ್ರದರ್ಶನಕ್ಕಿಡಲಾಗಿದ್ದು ಮೂರು ದಿನಗಳ ಕಾಲ ಭಕ್ತರು ವೀಕ್ಷಿಸಬಹುದಾಗಿದೆ.
ಏನಿದು ದಂತ ಸಿಂಹಾಸನ: ಶ್ರೀ ರಾಮಚಂದ್ರಾಪುರ ಮಠದ ಅಪರೂಪದ ವಸ್ತುಗಳಲ್ಲಿ ಹಸ್ತಿ ದಂತ ಸಿಂಹಾಸನ ಕೂಡ ಒಂದು. 33ನೇ ರಾಘವೇಶ್ವರ ಸ್ವಾಮೀಜಿಗಳಿಗೆ ಅಂದಿನ ಕಾಂಚಿ ಅರಸರು ಆನೆಯೊಂದನ್ನು ಬಳುವಳಿಯಾಗಿ ನೀಡಿದ್ದು, ಅವರು ಆನೆ ಮೂಲಕವೇ ಸಂಚರಿಸುತ್ತಿದ್ದರು. 33ನೇ ಶ್ರೀಗಳು ಇಹಲೋಕ ತ್ಯಜಿಸಿದ ನಂತರ ಅನ್ನ ಆಹಾರ ಬಿಟ್ಟ ಆನೆ ಮರಣವನ್ನಪ್ಪಿತು. ನಂತರ ಬಂದ ರಾಮಚಂದ್ರ ಭಾರತೀ ಸ್ವಾಮೀಜಿಗಳು ಅದೆ ಆನೆಯ ದಂತಗಳಿಂದ ಸಿಂಹಾಸನ ನಿರ್ಮಿಸಿದರು. ಅಪೂರ್ವ ಕೆತ್ತನೆಯನ್ನು ಒಳಗೊಂಡ ಈ ಕಲಾಕೃತಿಯಲ್ಲಿ ಶ್ರೀ ರಾಮಾಯಣ ಮತ್ತು ಮಹಾಭಾರತ, ದಶಾವತಾರ ಕಥೆಯನ್ನು ಅದ್ಭುತವಾಗಿ ಚಿತ್ರಿಸಲಾಗಿದ್ದು ಗಮನಸೆಳೆಯುವಂತಿದೆ.
ಮಾಡುಗೋಡು ಹಿರಿಯಣ್ಣಪ್ಪ ನೇತೃತ್ವದಲ್ಲಿ ಹೊಸಬಾಳೆ ಪುಟ್ಟಪ್ಪರ ಮನೆ ಆವರಣದಲ್ಲಿ 20 ಶಿಲ್ಪಿಗಳು 16 ವರ್ಷಗಳ ಕಾಲ ಕೆಲಸ ಮಾಡಿ ಸುಂದರ ಸಿಂಹಾಸನ ನಿರ್ಮಿಸಿದರು ಎನ್ನುತ್ತಾರೆ ಗುರುಕುಲದ ಪ್ರಧಾನ ಅರ್ಚಕ ಆಚಾರವಿಚಾರ ಗಜಾನನ ಭಟ್.
ಗಾಂಧೀಜಿ ವೀಕ್ಷಣೆ: ಈ ಅಪರೂಪದ ದಂತ ಸಿಂಹಾಸನವನ್ನು ಮಹಾತ್ಮಾಗಾಂಧಿ ವೀಕ್ಷಿಸಿದ್ದರು. ಲಾಹೋರ್‌ನಲ್ಲು ಕೂಡ ಪ್ರದರ್ಶನಕ್ಕಿಡಲಾಗಿತ್ತು. ಅಲ್ಲದೆ ವಿಶ್ವದಲ್ಲೆ ಇರುವ ಏಕೈಕ ಅಪರೂಪದ ಸಿಂಹಾಸನ ಎನ್ನಲಾಗುತ್ತಿದೆ.
ಗೋ ಸಮ್ಮೇಳನದಲ್ಲಿ ಪ್ರದರ್ಶನ: ಹಿಂದೆ ಶ್ರೀಮಠದಲ್ಲಿ ನಡೆದ ಗೋ ಸಮ್ಮೇಳನ ಮತ್ತು ನಂತರ ವರ್ಷದ ಶ್ರೀ ರಾಮೋತ್ಸವದಲ್ಲಿ ಭಕ್ತರ ಅಭಿಲಾಷೆಯಂತೆ ದಂತ ಸಿಂಹಾಸನವನ್ನು ಪ್ರದರ್ಶಕ್ಕಿಡಲಾಗಿತ್ತು. 5 ವರ್ಷಗಳ ನಂತರ ಮತ್ತೆ ಭಕ್ತರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಸಿಂಹಾಸನರೋಹಣ: ಏ.23 ರಾಘವೇಶ್ವರ ಸ್ವಾಮೀಜಿಗಳ ಅಡಕೆ ತುಲಾಭಾರ, ಅಡ್ಡಪಲ್ಲಕ್ಕಿ ಉತ್ಸವ, ಕಿರೀಟೋತ್ಸವ ನಡೆಯಲಿದ್ದು ಇದೆ ಸಂದರ್ಭಧಲ್ಲಿ ಶ್ರೀಗಳು ದಂತ ಸಿಂಹಾಸನಾರೋಹಣ ಮಾಡಲಿದ್ದು, ಶ್ರೀಮಠದಲ್ಲಿ ಪೂರ್ವಭಾವಿ ಸಿದ್ಧತೆ ನಡೆಯುತ್ತಿದೆ.
ಈ ಭಾರಿಯ ಶ್ರೀರಾಮೋತ್ಸವದಲ್ಲಿ ಶ್ರೀಗಳ ಹಸ್ತಿದಂತ ಸಿಂಹಾಸನರೋಹಣ ನಡೆಯಲಿದ್ದು ಪೂರ್ವಭಾವಿಯಾಗಿ 3 ದಿನಗಳ ಕಾಲ ಭಕ್ತರ ಕೋರಿಕೆಯಂತ ಶ್ರೀಗಳು ಸಿಂಹಾಸನ ವೀಕ್ಷಣೆಗೆ ಅವಕಾಶ ಮಾಡಿದ್ದಾರೆ. ಭಕ್ತರು ಮತ್ತು ಶ್ರೀಮಠದ ಶಿಷ್ಯರು ವೀಕ್ಷಿಸಿ ಮಂದಸ್ಮಿತರಾಗುವ ಅವಕಾಶ ಸಿಕ್ಕಂತಾಗಿದೆ ಎಂದು ಶ್ರೀಮಠದ ನಿರ್ವಹಣಾಸಮಿತಿಯ ಕೋಶಾಧ್ಯಕ್ಷ ಹೆದ್ಲಿ ಬಾಲಚಂದ್ರ ತಿಳಿಸಿದ್ದಾರೆ.
- ರವಿ ಬಿದನೂರು