ಸಂಸದ ವಿಶ್ವನಾಥ ಹೇಳಿಕೆಗೆ ಖಂಡನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.18
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮೈಸೂರಿನ ಸಂಸದ ವಿಶ್ವನಾಥ ನೀಡಿರುವ ಹೇಳಿಕೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರವಾಗಿ ಖಂಡಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.
ಬಾಂಬ್ ಸ್ಫೋಟದ ಹಿಂದೆ ಆರ್ಎಸ್ಎಸ್ ಕೈವಾಡ ಇದೆ ಎಂಬ ಹೇಳಿಕೆಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಧಕ್ಕೆಯುಂಟಾಗಿದ್ದು, ಸ್ವಾರ್ಥ, ಅಧಿಕಾರದ ದರ್ಪ, ಮತೀಯ ಭಾವನೆಯ ವಿಕೃತ ಮನಸ್ಸಿನಿಂದ ವಿಶ್ವನಾಥ್ ಇಂತಹ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ ಎಂದು ಸಂಘ ಆರೋಪಿಸಿದೆ.
ಬಾಂಬ್ ಸ್ಫೋಟದಂತಹ ಕೃತ್ಯವನ್ನು ಸಂಘ ಪರಿವಾರವು ಖಂಡಿಸುತ್ತದೆ. ಆದ್ದರಿಂದ ರಾಜ್ಯಪಾಲರು ಇಂತಹ ಹೇಯ ಕೃತ್ಯದ ಹಿಂದಿರುವ ಉಗ್ರಗಾಮಿಗಳನ್ನು ಶೀಘ್ರವಾಗಿ ಬಂಧಿಸಬೇಕು, ಉಗ್ರಗಾಮಿ ಸಂಘಟನೆಗಳ ಮೇಲೆ ತನಿಖೆ ನಡೆಸಲು ಕ್ರಮಕೈಗೊಳ್ಳಬೇಕು, ಅಸಂಬಂದ್ಧ ಹೇಳಿಕೆ ನೀಡಿರುವ ಸಂಸದ ವಿಶ್ವನಾಥ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಒತ್ತಾಯಿಸಿದೆ.