ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

22ಕ್ಕೆ ನಾಗಪ್ಪ ಶೆಟ್ಟಿಯವರ ಜನ್ಮ ಶತಮಾನೋತ್ಸವ

Lingaraj Badiger
Updated On : 20 Apr 2013, 10:47 am

ಕ.ಪ್ರ ವಾರ್ತೆ, ಶಿವಮೊಗ್ಗ, ಏ.19
ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಎಸ್.ಆರ್. ನಾಗಪ್ಪ ಶೆಟ್ಟಿಯವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಆಚರಿಸಲು ನಿರ್ಧರಿಸಲಾಗಿದೆ.
ಕುವೆಂಪು ರಂಗಮಂದಿರದಲ್ಲಿ ಏ.22ರಂದು ಸಂಜೆ 5ಕ್ಕೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ ತಿಳಿಸಿದರು.
ಮಲೆನಾಡಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಶೆಟ್ಟರು ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಮಹಾತ್ಮ ಗಾಂಧಿಜಿಯವರ ಕರೆಗೆ ಸ್ಪಂದಿಸಿ 1946ರಲ್ಲಿ ಸಮಾನ ಮನಸ್ಕರೊಂದಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರಾರಂಭಿಸಿದ ನಾಗಪ್ಪ ಶೆಟ್ಟರು ನಾಲ್ಕು ದಶಕ ಸಂಸ್ಥೆಯ ಅಭಿವೃದ್ಧಿಗೆ ದುಡಿದರು ಎಂದು ವಿವರಿಸಿದರು.
ಗ್ರಾಮೋದ್ಯೋಗಕ್ಕೆ ಒತ್ತು: ಅಪ್ಪಟ ಗಾಂಧಿವಾದಿಯಾಗಿದ್ದ ಅವರು ತಮ್ಮ ಜೀವಿತದ ಕೊನೆಯ ಕ್ಷಣದವರೆಗೆ ಸರಳ ಜೀವನ ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸಿದ್ದರು. ಶಿಕ್ಷಣ, ಸ್ವ ಉದ್ಯೋಗ ಮತ್ತು ಗ್ರಾಮೋದ್ಯೋಗಕ್ಕೆ ಹೆಚ್ಚು ಒತ್ತು ನೀಡಿ ಹುಟ್ಟು ಹಾಕಿದ ಹತ್ತಾರು ಸಂಸ್ಥೆಗಳನ್ನು ಇಂದು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಹೇಳಿದ ಅವರು, ಎನ್‌ಇಎಸ್ ಅಡಿಯಲ್ಲಿ 1ನೇ ತರಗತಿಯಿಂದ ಎಂಜಿನಿಯರಿಂಗ್ ಕಾಲೇಜಿನ ತನಕ ನಾನಾ ಹಂತದ ಸಂಸ್ಥೆಗಳನ್ನು ಕಾರ್ಯನಿರ್ವಹಿಸುತ್ತಿವೆ ಎಂದರು.
ಈ ಎಲ್ಲಾ ಶಿಕ್ಷಣ ಕೇಂದ್ರಗಳ ಹಿಂದೆ ನಾಗಪ್ಪ ಶೆಟ್ಟರ ಕರ್ತೃತ್ವ ಶಕ್ತಿ ಕೆಲಸ ಮಾಡಿದೆ. ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಜನ್ಮ ಶತಮಾನೋತ್ಸವ ಆಯೋಜಿಸಲಾಗಿದೆ ಎಂದು ವಿವರಿಸಿದರು.
22ರಂದು ನಡೆಯುವ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಸಮಿತಿ ಅಧ್ಯಕ್ಷ ಜಿ.ನಂಜುಂಡಪ್ಪ ಅಧ್ಯಕ್ಷತೆ ವಹಿಸಲಿದ್ದು, ಎನ್‌ಇಎಸ್‌ನ ಶಿಕ್ಷಣ ಸಂಸ್ಥೆಯ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಬೆಂಗಳೂರು ಆರ್.ವಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಕೆ. ಪಾಂಡುರಂಗ ಶೆಟ್ಟಿ ಸನ್ಮಾನಿಸಲಿದ್ದಾರೆ ಎಂದರು.
ಸಮಿತಿ ಉಪಾಧ್ಯಕ್ಷ ಜಿ.ಎಸ್. ನಾಗರಾಜ್, ಸಹ ಕಾರ್ಯದರ್ಶಿ ಎನ್.ಟಿ. ನಾರಾಯಣ ರಾವ್, ಖಜಾಂಚಿ ಅಶ್ವತ್ಥ ನಾರಾಯಣ, ನಿರ್ದೇಶಕಿ ಸುಶೀಲಮ್ಮ, ಎಸ್.ಎಲ್.ಶ್ರೀರಂಗರಾಜು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement