ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚುನಾವಣೆ ಹಿನ್ನೆಲೆ: 25 ತನಿಖಾ ತಂಡ

Lingaraj Badiger
Updated On : 20 Apr 2013, 10:56 am

ಶಿವಮೊಗ್ಗ: ಪ್ರಮುಖ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಕೇಂದ್ರೀಕೃತ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯ 25 ಕಡೆಗಳಲ್ಲಿ ಅವು ಕಾರ್ಯನಿರ್ವಹಿಸಲಾರಂಭಿಸಿವೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಚೆಕ್‌ಪೋಸ್ಟ್ ಆರಂಭಿಸಲಾಗಿದ್ದು, ಹಣ, ಮದ್ಯ ಮತ್ತಿತರ ವಸ್ತುಗಳ ಸಾಗಾಣೆಯ ಮೇಲೆ ಕಣ್ಣಿಡುವ ಉದ್ದೇಶದಿಂದ ಚುನಾವಣಾ ಆಯೋಗದ ನಿರ್ದೇಶದಂತೆ ತಂಡ ರಚಿಸಲಾಗಿದೆ.   ತಾಲೂಕು- ಜಿಲ್ಲೆಗಳನ್ನು ಸಂಪರ್ಕಿಸುವ ಹಾಗೂ ಅತೀ ಹೆಚ್ಚು ವಾಹನ ದಟ್ಟಣೆಯಿರುವ ಪ್ರಮುಖ ರಸ್ತೆಗಳನ್ನು ಗುರುತಿಸಿ, ಅಂತಹ ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್, ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಣೆ ಮಾಡಲಾರಂಭಿಸಿದ್ದಾರೆ.  ದಿನದ 24 ಗಂಟೆ ಕಾಲವೂ ಈ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, ತಲಾ 8 ಗಂಟೆಗಳ ಪಾಳಿ ಆಧಾರದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಹೊಳಲೂರು, ಉಂಬ್ಳೆಬೈಲು, ನಾರಾಯಣಪುರ, ಕೊಮ್ಮನಾಳು ಗ್ರಾಮಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಅದೇ ರೀತಿ ಭದ್ರಾವತಿಯ ಕಾರೇಹಳ್ಳ, ಕಲ್ಲಾಪುರ, ಹೆಂಚಿನ ಸಿದ್ದಾಪುರ, ಆನವೇರಿ, ಬಿಆರ್‌ಪಿ, ಸಾಗರದ ಚೂರಿಕಟ್ಟೆ, ಸಾಲೂರು, ಕಳವೆ, ಕೋಗಾರು ನಾಗರಹೊಳ್ಳಿ ರಸ್ತೆಯಲ್ಲಿ, ಸೊರಬ ವಿಧಾನಸಭಾ ಕ್ಷೇತ್ರದ ಶಕುನವಳ್ಳಿ, ಅಗಸನಹಳ್ಳಿ, ಬಾರಂಗಿ, ಹರಿಷಿ, ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಜಕ್ಕಿನಕೊಪ್ಪ ಕ್ರಾಸ್, ಕವಾಸಪುರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಗಡಿಕಲ್ಲು, ಬಿದರುಗೋಡು, ಕಂಬಾರಹಳ್ಳಿ ಹಾಗೂ ಹೊಸನಗರ ವಿಧಾನಸಭಾ ಕ್ಷೇತ್ರದ ಮಾಸ್ತಿಕಟ್ಟೆ, ನಾವಳ್ಳಿಗಳಲ್ಲಿ ಕೇಂದ್ರಿಕೃತ ಚೆಕ್‌ಪೋಸ್ಟ್ ಆರಂಭಿಸಲಾಗಿದೆ.
ಜಾತ್ಯತೀತ ಅಭ್ಯರ್ಥಿ ಬೆಂಬಲಿಸಲು ಫರ್ಮಾನು
ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಮತದಾರರು ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ರಾಜ್ಯ ಒಕ್ಕಲಿಗರ ಜಾಗೃತ ಹೋರಾಟ ವೇದಿಕೆ ಫರ್ಮಾನು ಹೊರಡಿಸಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಗುಡೇಮಾರನಹಳ್ಳಿ ತಿಮ್ಮಯ್ಯ, ಒಕ್ಕಲಿಗರನ್ನು ರಾಜಕೀಯ ಪಕ್ಷಗಳು ಕೆಟ್ಟದಾಗಿ ನಡೆಸಿಕೊಂಡು ಬರುತ್ತಿವೆ. ಒಕ್ಕಲುತನವನ್ನೇ ಮುಖ್ಯ ಕಸುಬಾಗಿ ಸ್ವೀಕರಿಸಿರುವ ಒಕ್ಕಲಿಗರು ಬಿಡುವಿನ ಸಮಯದಲ್ಲಿ ಆಡಳಿತ ನಡೆಸಲಾರಂಭಿಸಿದರು. ಬಲಿಷ್ಠ ಸಮುದಾಯವರು ಒಕ್ಕಲಿಗರ ಮೇಲೆ ದಬ್ಬಾಳಿಕೆ ಮಾಡಿದರೂ ಅದನ್ನು ಸಮಾಜ ಪ್ರತಿಭಟಿಸಲಿಲ್ಲ. ಆದರೆ ಇದನ್ನೇ ನಮ್ಮ ಬಲಹೀನತೆ ಎಂದು ಭಾವಿಸಿದ ಕೆಲ ಸ್ವಾರ್ಥಿಗಳು ಒಕ್ಕಲಿಗರನ್ನು ತುಳಿಯಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಜಾತ್ಯತೀತ ಜನತಾ ಪಕ್ಷ ಎಲ್ಲ ವರ್ಗದ ಜನರನ್ನು ಒಳಗೊಂಡಿದ್ದರೂ ಅದನ್ನು ಒಕ್ಕಲಿಗರ ಪಕ್ಷ ಎಂದು ಬಿಂಬಿಸಲಾಗಿದೆ ಎಂದು ದೂರಿದ ಅವರು, ಬೇರೆ ಪಕ್ಷಗಳಲ್ಲಿ ಒಕ್ಕಲಿಗರಿದ್ದರೂ ಅವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement