ಭಕ್ತರ ಉದ್ಧಾರಕ್ಕೆ ದೇವರ ಅವತಾರ
ಕ.ಪ್ರ ವಾರ್ತೆ, ಹೊಸನಗರ, ಏ.19
ದೇವರ ಮೂಲ ಸ್ವರೂಪ ದರ್ಶನ ದುರ್ಲಭ. ಆದರೆ ಭಕ್ತರ ಇಷ್ಟಾರ್ಥ ಸಿದ್ಧಿ ಮಾಡಿ ಉದ್ಧಾರ ಮಾಡುವುದಕ್ಕಾಗಿ ದೇವರು ನಾನಾ ಬಗೆಯಲ್ಲಿ ಅವತರಿಸುತ್ತಾನೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಹೇಳಿದರು.
ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ರಾಮೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ, ಶ್ರೀರಾಮನ ಅವತಾರದಲ್ಲಿ ಭಗವಂತ ಸಾರ್ವಕಾಲಿಕ ಆದರ್ಶಗಳನ್ನು ಇಡೀ ಜಗತ್ತಿಗೆ ಬೋಧಿಸಿದ್ದಾನೆ. ರಾಮನವಮಿ ಆಚರಣೆ ಮೂಲಕ ಶ್ರೀರಾಮ ಪ್ರತಿಮನೆಯಲ್ಲೂ ಹುಟ್ಟುತ್ತಾನೆ ಎಂದರು.
ದೀಪವನ್ನು ಎತ್ತರದ ಸ್ಥಾನದಲ್ಲಿಡುವುದು ಅದರ ಬೆಳಕು ಎಲ್ಲಡೆ ಪಸರಿಸಲಿ ಎಂದು. ಅಂತೆಯೆ ದೇವರು ಮತ್ತು ಗುರುಗಳನ್ನು ಕೂಡ ಎತ್ತರದ ಸ್ಥಾನದಲ್ಲಿಡುವುದು ಎಲ್ಲಡೆ ಜ್ಞಾನ ಬೆಳಗುವುದಕ್ಕಾಗಿ ಎಂದು ತಿಳಿಸಿದರು.
ಹೊರನಾಡು ಅನ್ನಪೂರ್ಣ್ವೇಶ್ವರಿ ದೇಗುಲದ ಧರ್ಮದರ್ಶಿ ಭೀಮೇಶ್ವರ ಜೋಷಿ ಧ್ವಜಾರೋಹಣ ಮಾಡುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಂಚಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿ, ಜಿ.ಎಂ. ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.