ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪುರಸಭೆ ನಿರ್ಲಕ್ಷ್ಯ: ನೀರಿಗೆ ತತ್ವಾರ

Rashmi Kasaragodu
Updated On : 21 Apr 2013, 12:38 pm

ಕ.ಪ್ರ ವಾರ್ತೆ, ಶಿಕಾರಿಪುರ, ಏ.20
ಐತಿಹಾಸಿಕ ಶಿಕಾರಿಪುರದ ಹುಚ್ಚೂರಾಯಸ್ವಾಮಿ ರಥೋತ್ಸವಕ್ಕೆ ಕೆಲ ದಿನಗಳು ಮಾತ್ರ ಉಳಿದಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ಭಕ್ತಾಧಿಗಳು, ಅತಿಥಿಗಳು ನಿತ್ಯ ಹೆಚ್ಚಾಗುತ್ತಿದ್ದು ಪುರಸಭೆ ಮಾತ್ರ ತನ್ನ ಜವಾಬ್ದಾರಿ ಮರೆತು ಪಟ್ಟಣದ ನಿವಾಸಿಗಳಿಗೆ ವಾರದಿಂದ ಕುಡಿವ ನೀರನ್ನು ಸಮರ್ಪಕವಾಗಿ ಪೂರೈಸದೆ ನಿರ್ಲಕ್ಷ್ಯ ತಾಳಿದೆ.
ಪೈಪ್‌ಲೈನ್ ತೊಂದರೆ: ಯಡಿಯೂರಪ್ಪ ಅವಧಿಯಲ್ಲಿ ಕುಡಿವ ನೀರಿನ ಸಮಸ್ಯೆ ಭವಿಷ್ಯದಲ್ಲಿ ಎಂದಿಗೂ ತಲೆದೋರದಂತೆ ಸಕ್ರಮ ಕೈಗೊಳ್ಳಲಾಗಿತ್ತು. ಸಮೀಪದ ಅಂಜನಾಪುರ ಜಲಾಶಯದಿಂದ ನೇರವಾಗಿ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ  ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಸರಬರಾಜು ಆಗುವಂತೆ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನೂತನ ಪೈಪ್‌ಲೈನ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದೀಗ ಮಾರ್ಗ ಮಧ್ಯೆ ಪೈಪ್‌ಲೈನ್ ತೊಂದರೆಯಿಂದಾಗಿ ನೀರಿನ ಅವ್ಯವಸ್ಥೆ ಹೆಚ್ಚಾಗಿದೆ. ಈ ಬಗ್ಗೆ ಕಳೆದ ವಾರದಿಂದ ಸ್ಥಳೀಯರು ಪುರಸಭೆಗೆ ಅಲೆದು ದೂರವಾಣಿ ಮೂಲಕ ತಮ್ಮ ಸಂಕಟ ತೋಡಿಕೊಂಡರೂ ಇಂದಿಗೂ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.
ಶಿಕಾರಿಪುರ ಹುಚ್ಚೂರಾಯಸ್ವಾಮಿ ರಥೋತ್ಸವ ನಾಡಿನಲ್ಲಿಯೇ ಅತ್ಯಂತ ಪ್ರಸಿದ್ಧವಾಗಿದ್ದು, ಧವನ ಹುಣ್ಣಿಮೆಯಂದು ಜರುಗುವ ಈ ಬೃಹತ್ ಧಾರ್ಮಿಕ ಕಾರ್ಯಕ್ಕೆ ಪ್ರತಿ ವರ್ಷ ನಾಡಿನ ಮೂಲೆ ಮೂಲೆಯಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಶುದ್ಧ ನೀರು, ಸ್ವಚ್ಛತೆ, ದೀಪ ಮತ್ತಿತರ ಮೂಲಭೂತ ಸಮಸ್ಯೆ ಬಗ್ಗೆ ಹೆಚ್ಚಿನ  ನಿಗಾ ವಹಿಸಬೇಕಾದ ಪುರಸಭೆ ಅಧಿಕಾರಿಗಳ ಕರ್ತವ್ಯದ ಬಗ್ಗೆ ಇದೀಗ ಅನುಮಾನ ಮೂಡಿಸುವಂತಾಗಿದೆ.
ಪುರಸಭೆ ಜಾಣಮೌನ: ರಥೋತ್ಸವದ ವಾರದ ಮುನ್ನಾ ದಿನದಿಂದಲೇ ನೀರಿನ ಸಮಸ್ಯೆ ತಲೆದೋರಿರುವುದರಿಂದ ಸ್ಥಳೀಯರು ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸುವ ಬಗ್ಗೆ ಚಿಂತಿಸುವಂತಾಗಿದೆ. ರಾಮನವಮಿಯಂದು ನೀರಿನ ಸಮಸ್ಯೆಯಿಂದಾಗಿ ಹಲವರು ಹಬ್ಬ ಮರೆತು ನೀರು ಸಂಗ್ರಹದಲ್ಲಿ ತಲ್ಲೀನರಾಗಿದ್ದು ಈ ಬಗ್ಗೆ ಪುರಸಭೆ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ.
ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಮನೋಹರ್, ಪಟ್ಟಣದ ಒಳಚರಂಡಿ ಕಾಮಗಾರಿ ಸಂದರ್ಭ ನೀರು ಸರಬರಾಜು ಪೈಪ್‌ಲೈನ್ ತುಂಡಾಗಿ ಸಮಸ್ಯೆ ಉದ್ಭವವಾಗಿದೆ. ಶೀಘ್ರ ಲೋಪ ಸರಿಪಡಿಸಿ ನೀರು ಸರಬರಾಜು ಮಾಡುವುದಾಗಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಮಾತ್ರ ಚುನಾವಣೆಯಲ್ಲಿ ಜಯ ಗಳಿಸುವ ಬಗ್ಗೆ ತಲ್ಲೀನರಾಗಿ ಸ್ಥಳೀಯರ ಗೋಳು ಕೇಳುವವರಿಲ್ಲವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement