ಭದ್ರಾವತಿ ಕ್ಷೇತ್ರಕ್ಕೆ 2 ಮತಯಂತ್ರ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.20
ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಈ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ತಲಾ 2 ಎಲೆಕ್ಟ್ರಾನಿಕ್ ಮತಯಂತ್ರಗಳಿರುತ್ತವೆ.
ಒಂದು ಮತಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರಿಗೆ ಅವಕಾಶವಿರುತ್ತದೆ. ಈ ಕ್ಷೇತ್ರದಿಂದ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸು ಪಡೆಯುವ ಕೊನೆಯ ದಿನವಾದ ಶನಿವಾರ ಐವರು ನಾಮಪತ್ರ ವಾಪಸು ಪಡೆದಿದ್ದು, ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಣದಲ್ಲಿ 17 ಅಭ್ಯರ್ಥಿಗಳು ಉಳಿದಿದ್ದಾರೆ.
ಜಿಲ್ಲೆಯ 7 ಕ್ಷೇತ್ರದಲ್ಲಿ ನಾಲ್ವರು ಮಹಿಳೆಯರೂ ಸೇರಿದಂತೆ ಒಟ್ಟು 87 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 14, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ- 12, ತೀರ್ಥಹಳ್ಳಿ- 10, ಶಿಕಾರಿಪುರ- 12, ಸಾಗರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ತಲಾ 11 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಒಟ್ಟು 12,94,910 ಮತದಾರಿದ್ದಾರೆ. ಏ.7ರವರೆಗೆ ಪರಿಷೃತಗೊಂಡ ಪಟ್ಟಿ ಇದಾಗಿದ್ದು, ಹೊಸದಾಗಿ ಹೆಸರು ಸೇರ್ಪಡೆಗೆ ಅರ್ಜಿ ನೀಡಿದವರ ದಾಖಲೆಗಳನ್ನು ಪರಿಶೀಲಿಸಿ, ಅರ್ಹರನ್ನು ಪಟ್ಟಿಯಲ್ಲಿ ಸೇರ್ಪಡಿಸಲಾಗಿದೆ. ಜನವರಿ 2013ರವರೆಗಿನ ಮತದಾರರ ಪಟ್ಟಿಯಲ್ಲಿ ಒಟ್ಟು 12,56,024 ಮತದಾರರಿದ್ದರು. ಇದರಲ್ಲಿ 6,34,485 ಪುರುಷರು, 6,25,151 ಮಹಿಳಾ ಮತದಾರಿದ್ದರು. ಏ.7ರವರಗಿನ ಪರಿಷ್ಕೃತ ಮತದಾರರ ಪಟ್ಟಿಯ ಪ್ರಕಾರ 12,94,910 ಮತದಾರಿದ್ದಾರೆ.