ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಹಿಳೆಯರ ಬೆಂಬಲದೊಂದಿಗೆ ಗೆಲವು ನಿಶ್ಚಿತ

Rashmi Kasaragodu
Updated On : 21 Apr 2013, 12:36 pm


ಕ.ಪ್ರ. ವಾರ್ತೆ, ಹೊಸನಗರ, ಮಾ.20
ಈ ಬಾರಿ ಮಹಿಳೆಯರ ಬೆಂಬಲ ನೂರಕ್ಕೆ ನೂರರಷ್ಟು ಸಿಗಲಿದ್ದು ಸಾಗರ ಕ್ಷೇತ್ರದಿಂದ ಗೆಲವು ಸಾಧಿಸುತ್ತೇನೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶರಾವತಿ ಸಿ. ರಾವ್ ಹೇಳಿದರು.
ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸಾಗರದಲ್ಲಿ ಇದೇ ಮೊದಲ ಬಾರಿ ರಾಷ್ಟ್ರೀಯ ಪಕ್ಷವೊಂದು ಮಹಿಳೆಗೆ ಆದ್ಯತೆ ನೀಡಿದ್ದು, ಅದರ ಪೂರ್ಣ ಲಾಭ ಬಿಜೆಪಿಗೆ ಸಿಗಲಿದೆ ಎಂದರು.
ಪುರಸಭೆ ಸದಸ್ಯೆ, ಉಪಾಧ್ಯಕ್ಷೆ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ನನಗೆ ರಾಜಕೀಯ ಹೊಸತಲ್ಲ. ನಮ್ಮ ಕುಟುಂಬ ಕೂಡ ರಾಜಕೀಯ ಹಿನ್ನೆಲೆಯಲ್ಲಿ ಬೆಳೆದು ಬಂದಿದೆ. ಯಾವುದೆ ಕಪ್ಪುಚುಕ್ಕೆ ಇಲ್ಲದ ನನ್ನ ಒಂದೂವರೆ ದಶಕದ ರಾಜಕೀಯ ಜೀವನಕ್ಕೆ ಮತದಾರರು ಮನ್ನಣೆ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನುಡಿದಂತೆ ನಡೆದಿದೆ: ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳನ್ನು ಬಹುತೇಕ ಜಾರಿಗೆ ತಂದಿದೆ. ಮತ್ತೆ ಅಧಿಕಾರಕ್ಕೆ ಬಂದರೆ ಪ್ರಸ್ತುತ ನೀಡಿರುವ ಭರವಸೆ ಈಡೇರಲಿದೆ. ಮತದಾರರು ಗೊಂದಲಕ್ಕೀಡಾಗದೆ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.
ರೆಸಾರ್ಟ್ ರಾಜಕಾರಣ ಮಾಡಲ್ಲ: ತಾವು ಶಾಸಕರಾದಲ್ಲಿ ಯಾವುದೆ ಹಂಗಿಲ್ಲದೆ ಪಕ್ಷ ನಿಷ್ಠೆಯ ಜೊತೆಗೆ ಅಭಿವೃದ್ಧಿಯತ್ತ ಗಮನಹರಿಸುತ್ತೇನೆ. ದಿನಕ್ಕೊಂದು ಪಕ್ಷ ಬದಲಿಸುವ ಮತ್ತು ರೆಸಾರ್ಟ್ ರಾಜಕೀಯ ಮಾಡುವುದಿಲ್ಲ. ರೆಸಾರ್ಟ್ ರಾಜಕಾರಣಿಗೆ ಮತದಾರ ಸರಿಯಾದ ಪಾಠ ಕಲಿಸಲಿದ್ದಾನೆ ಎಂದು ಬೇಳೂರಿಗೆ ಟಾಂಗ್ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಆಂತರಿಕ ಗೊಂದಲದಿಂದ ಬಿಜೆಪಿಗೆ ಕೊಂಚ ಘಾಸಿಯಾಗಿದೆ. ಆದರೆ ಮತದಾರರಿಗೆ ಪಕ್ಷ ಅನ್ಯಾಯ ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಬೇಕು.
ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ಎಂಬುದು ನೆನಪಿರಲಿ. ಬಿಜೆಪಿಯ ಕಾರ್ಯಕರ್ತರ ಶಕ್ತಿ ಏನು ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದರು.
ಜಿಪಂ ಸದಸ್ಯೆ ಶುಭಾಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ನಾಗರತ್ನ ದೇವರಾಜ್, ಕಾರ್ಯದರ್ಶಿ ಎ.ವಿ. ಮಲ್ಲಿಕಾರ್ಜುನ್, ಪ್ರಮುಖರಾದ ಉಮೇಶ ಕಂಚುಗಾರ, ನಿಟ್ಟೂರು ಸುರೇಶ್, ಬೆಳ್ಳೂರು ತಿಮ್ಮಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement