ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಸಕ ಸಂಗಮೇಶ್‌ಗೆ ಕೆಜೆಪಿ ಬೆಂಬಲ

Rashmi Kasaragodu
Updated On : 21 Apr 2013, 12:35 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.20
ಭದ್ರಾವತಿ ಸಮೀಕರಣ ಮತ್ತೆ ಬದಲಾಗಿದೆ. ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ ಅವರು ಕೆಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸೂಚನೆ ಮೇಲೆ ಪಕ್ಷದ ಅಧಿಕೃತ ಅಭ್ಯರ್ಥಿ ಕದಿರೇಶ್ ಅವರು ಶನಿವಾರ ನಾಮಪತ್ರ ವಾಪಸು ಪಡೆದಿದ್ದಾರೆ.
ಸಂಗಮೇಶ್ ಅವರ ನಾಮಪತ್ರ ವಾಪಸು ಪಡೆಯುವಂತೆ ಮಾಡಲು ಕಾಂಗ್ರೆಸ್ ಪಕ್ಷವು ಕಳೆದೆರಡು ದಿನಗಳಿಂದ ಸತತ ಪ್ರಯತ್ನ ನಡೆಸಿತ್ತು. ಪಕ್ಷದ ವೀಕ್ಷಕರು ಆಗಮಿಸಿ ಸಂಗಮೇಶ್ ಜತೆ ಚರ್ಚಿಸಿದ್ದು ಫಲ ನೀಡಲಿಲ್ಲ. ಶನಿವಾರ ಬೆಳಿಗ್ಗೆ ಭದ್ರಾವತಿಯ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂದಿರದಲ್ಲಿ ಬೆಂಬಲಿಗರ ಸಭೆ ಕರೆದಿದ್ದ ಸಂಗಮೇಶ್ ಅವರು ಶುಕ್ರವಾರ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ.
ಈ ನಡುವೆ ಕರ್ನಾಟಕ ಜನತಾ ಪಕ್ಷವೂ ಸಹ ಸಂಗಮೇಶ್ ಅವರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಆರಂಭಿಸಿತ್ತು. ಸ್ವತಃ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಂಗಮೇಶ್ ಜತೆ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಆಗ ಸಂಗಮೇಶ್ ಕೆಜೆಪಿಯತ್ತ ಒಲವು ತೋರಿದರು.
ಸಭೆಯಲ್ಲಿ ಘೋಷಣೆ: ನಿಗದಿಯಂತೆ ಭದ್ರಾವತಿಯಲ್ಲಿ ಸಂಗಮೇಶ್ ಬೆಂಬಲಿಗರ ಸಭೆ ಆರಂಭವಾಯಿತು. ಸಭೆಯಲ್ಲಿ ಮಾತನಾಡಿದ ಸಂಗಮೇಶ್ ಅವರು, ಕರ್ನಾಟಕ ಜನತಾ ಪಕ್ಷವು ತಮ್ಮನ್ನು ಬೆಂಬಲಿಸಲಿರುವ ವಿಷಯ ಪ್ರಕಟಿಸಿ ತರಾತುರಿಯಿಂದ ಶಿವಮೊಗ್ಗದತ್ತ ಧಾವಿಸಿದರು.
ಅವರು ಸೀದಾ ಆಗಮಿಸಿದ್ದು ವಿನೋಬನಗರದಲ್ಲಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ನಿವಾಸಕ್ಕೆ. ಅಲ್ಲಿ ಸುದೀರ್ಘ ಚರ್ಚೆ ನಡೆಸಿದ ಅವರು ಮಧ್ಯಾಹ್ನ ಕೆಜೆಪಿ ಕಚೇರಿಗೆ ಆಗಮಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್, ರಾಜ್ಯ ಸಮಿತಿ ಸದಸ್ಯ ಪುರುಷೋತ್ತಮ್, ಭದ್ರಾವತಿ ಕೆಜೆಪಿ ಅಭ್ಯರ್ಥಿ ಕದಿರೇಶ್ ಸೇರಿದಂತೆ ಹಲವು ಮುಖಂಡರೊಡಗೂಡಿ ಪತ್ರಿಕಾಗೋಷ್ಠಿ ನಡೆಸಿದರು. ಇದಾಗುತ್ತಿದ್ದಂತೆ ಸಂಗಮೇಶ್ ಹಾಗೂ ಕದಿರೇಶ್ ಅವರು ಪ್ರತ್ಯೇಕವಾಗಿ ಭದ್ರಾವತಿಗೆ ತೆರಳಿದರು. ಕದಿರೇಶ್ ಅವರು ಚುನಾವಣಾಧಿಕಾರಿ ಕಚೇರಿಗೆ ತೆರಳಿ ಕೆಜೆಪಿ ಪಕ್ಷದಿಂದ ಸಲ್ಲಿಸಿದ್ದ ನಾಮಪತ್ರ ವಾಪಸು ಪಡೆಯುವುದರೊಂದಿಗೆ ಬಿರುಸಿನಿಂದ ನಡೆದ ವಿದ್ಯಾಮಾನಗಳ ಒಂದು ಹಂತ ಪರಿಸಮಾಪ್ತಿಯಾಯಿತು.
ಸೇರ್ಪಡೆ ಇಲ್ಲ: ಬಿ.ಕೆ. ಸಂಗಮೇಶ್ ಅವರು ಭದ್ರಾವತಿ ಕ್ಷೇತ್ರದಲ್ಲಿ ಕೆಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆಯೇ ಹೊರತು ಅವರು ಕೆಜೆಪಿ ಸೇರಿಲ್ಲ. ಕೆಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆದ ಸಂದರ್ಭದಲ್ಲಿ ಅವರು ಪಕ್ಷದ ಶಾಲನ್ನು ಹಾಕಿಸಿಕೊಳ್ಳುವುದಕ್ಕಾಗಲಿ, ಧ್ವಜ ಸ್ವೀಕರಿಸುವುದಕ್ಕಾಗಲಿ ಒಪ್ಪಲಿಲ್ಲ. ಕೆಜೆಪಿ ಮುಖಂಡರೂ ಸಹ ಒತ್ತಾಯ ಮಾಡಲಿಲ್ಲ. ಕೆಜೆಪಿ ಅಭ್ಯರ್ಥಿ ಕದಿರೇಶ್ ತಮ್ಮನ್ನು ಬೆಂಬಲಿಸಿ ನಾಮಪತ್ರ ವಾಪಸು ಪಡೆಯುತ್ತಿರುವುದಕ್ಕೆ, ಸಹಕರಿಸಿದ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರಷ್ಟೇ.


ಕೆಜೆಪಿ ಬಾಗಿಲಲ್ಲೇ ಹೊಯ್‌ಕೈ


ಸಂಸದ ಬಿ.ವೈ. ರಾಘವೇಂದ್ರ ಅವರ ನಿವಾಸದಿಂದ ಸಂಗಮೇಶ್ ಹಾಗೂ ಕದಿರೇಶ್ ಅವರು ಬೇರೆ ಬೇರೆ ವಾಹನದಲ್ಲಿ ಜೈಲ್ ರಸ್ತೆಯಲ್ಲಿರುವ ಕೆಜೆಪಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಎರಡೂ ಪಕ್ಷದ ಭದ್ರಾವತಿ ಕಾರ್ಯಕರ್ತರ ನಡುವೆ ಹೊಯ್‌ಕೈ ನಡೆಯಿತು.
ವಾಹನಗಳು ನಿಲ್ಲುತ್ತಿದ್ದಂತೆ ಸಂಗಮೇಶ್ ಬೆಂಬಲಿಗನೊಬ್ಬ ಕೆಜೆಪಿ ಬೆಂಬಲ ಪಡೆಯುತ್ತಿರುವ ಬಗ್ಗೆ ಲಘುವಾಗಿ ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಭದ್ರಾವತಿ ಕೆಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಇಬ್ಬರ ನಡುವೆ ರಸ್ತೆಯಲ್ಲಿಯೇ ತೀವ್ರ ವಾಗ್ವಾದ ನಡೆಯಿತು. ಪರಸ್ಪರ ಹಲ್ಲೆ ಯತ್ನವೂ ನಡೆಯಿತು. ಇದನ್ನು ಕಂಡ ಸಂಗಮೇಶ್ ಹಾಗೂ ಕದಿರೇಶ್ ಅವರು ಸಮಾಧಾನಪಡಿಸಿ ಪಕ್ಷದ ಕಚೇರಿಯೊಳಗೆ ಕರೆದುಕೊಂಡು ಹೋದರು.
ಪತ್ರಿಕಾಗೋಷ್ಠಿ ಮುಗಿದ ನಂತರ ಮತ್ತೆ ವಾಗ್ವಾದ ಶುರುವಾಗಿತ್ತು. ಸ್ವಲ್ಪ ಹೊತ್ತು ಮಾತನಾಡಿದ ಅವರು ನಾಮಪತ್ರ ವಾಪಸು ಪಡೆಯುವ ಅಂತಿಮ ಸಮಯ ಹತ್ತಿರವಾಗುತ್ತಿದ್ದ ಕಾರಣ ನಂತರ ಅಲ್ಲಿಂದ ಭದ್ರಾವತಿಯತ್ತ ಸಾಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement