ಹಣ ವಶ: ದಾಖಲೆ ನೋಡಿ ವಾಪಸ್
ಶಿವಮೊಗ್ಗ: ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಪ್ರತಿಯೊಂದು ಚೆಕ್ಪೋಸ್ಟ್ ಬಳಿ ತನಿಖೆ ನಡೆಯುತ್ತಿದೆ. ಈ ಸಂಬಂಧ ಮಗಳ ಮದುವೆಗೆ ಚಿನ್ನಾಭರಣ ಕೊಳ್ಳಲು ಲಕ್ಷಾಂತರ ರುಪಾಯಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ದಸ್ತಗಿರಿ ಮಾಡಿದ ಘಟನೆ ಶುಕ್ರವಾರ ಶಿಕಾರಿರಪುರದ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ನಡೆದಿದೆ. ಚಿನ್ನದ ಬೆಲೆ ಕಡಿಮೆಯಾದ ಬೆನ್ನಲ್ಲೇ ಚಿನ್ನಾಭರಣಗಳನ್ನು ಖರೀದಿಸಲು ಸೊರಬದಿಂದ ಶಿವಮೊಗ್ಗಕ್ಕೆ ಶಿಕಾರಿಪುರ ಮಾರ್ಗವಾಗಿ ಬರುತ್ತಿದ್ದ ಕುಟುಂಬವೊಂದನ್ನು ಅತ್ತಿಬೆಲೆ ಚೆಕ್ ಪೋಸ್ಟ್ ಪೊಲೀಸರು ತನಿಖೆ ಮಾಡಿದ್ದಾರೆ. ಈ ವೇಳೆ ರು. 2 ಲಕ್ಷ ದೊರೆತಿದ್ದು, ನಂತರ ಈ ಹಣಕ್ಕೆ ಸೂಕ್ತ ದಾಖಲೆ (ಬ್ಯಾಂಕ್ ಚಲನ್, ಮದುವೆಯ ಆಹ್ವಾನ ಪತ್ರಿಕೆ) ಗಳನ್ನು ನೀಡಲಾಗಿತ್ತು. ಇದನ್ನು ಪರಿಶೀಲಿಸಿದ ಪೊಲೀಸರು ಹಣ ವಾಪಸ್ ನೀಡಿ, ಅವರನ್ನು ಬಿಡುಗಡೆ ಮಾಡಿದ್ದಾರೆ.
ಸ್ಫೋಟಕ ವಸ್ತುಗಳ ವಶ
ಶಿವಮೊಗ್ಗ: ಮನೆಯೊಂದರ ಹಿಂಭಾಗದಲ್ಲಿನ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಕಲ್ಲು ಕೋರೆ ಮಾಲೀಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಘಟನೆ ತಾಲೂಕಿನ ದೊಡ್ಡಿಬೀಳು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕೃಷ್ಣಪ್ಪ ಎಂಬುವವರ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಸ್ಫೋಟಕಗಳನ್ನು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 50 ಕೆ.ಜಿ. ತೂಕದ 2 ಚೀಲ ಅಮೋನಿಯಂ ನೈಟ್ರೇಟ್, 30 ಜಿಲೆಟಿನ್ ನೋಟಗಳು, ಕನೆಕ್ಟ್ ನೀಡಲಾಗಿದ್ದ 30 ಕೇಪುಗಳು, ಕನೆಕ್ ಮಾಡದ 10 ಕೇಪುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.
ಮೊಬೈಲ್ ಕಳವು
ಶಿವಮೊಗ್ಗ: ಮೊಬೈಲ್ ಅಂಗಡಿಯ ಚಾವಣಿ ತೆಗೆದು ಅಪರಿಚಿತರು ಸಾವಿರಾರು ರುಪಾಯಿ ಮೌಲ್ಯದ ಮೊಬೈಲ್ ಅಪಹರಿಸಿ ಪರಾರಿಯಾಗಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ನಡೆದಿದೆ. ಇಲ್ಲಿನ ಕುರುಬರ ಬೀದಿಯಲ್ಲಿರುವ ಶ್ರೀಶೈಲ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, 1,990 ಮೌಲ್ಯದ ಮೊಬೈಲನ್ನು ಅಪಹರಿಸಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳಬಟ್ಟಿ ವಶ
ಸೊರಬ: ತಾಲೂಕಿನ ದ್ಯಾವಸ ಮತ್ತು ಮಂಗರ್ಶಿಕೊಪ್ಪದಲ್ಲಿ ಅಕ್ರಮವಾಗಿ ತಯಾರಿಸುತ್ತಿದ್ದ ಕಳ್ಳಬಟ್ಟಿಯನ್ನು ಅಬಕಾರಿ ಸಬ್ ಇನ್ಸ್ಪೆಕ್ಟರ್ ಮಮತಾ ಮತ್ತು ಸಿಬ್ಬಂದಿ ಶನಿವಾರ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಕಳಬಟ್ಟಿಯ ಮೌಲ್ಯ ಸುಮಾರು ರು. 5,000 ವಾಗಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತಿನ ವೇಗಕ್ಕೆ ವ್ಯಕ್ತಿ ಸಾವು
ಶಿವಮೊಗ್ಗ: ಲಗಾಮು ತಪ್ಪಿ ವೇಗವಾಗಿ ಓಡಿದ ಎತ್ತುಗಳು ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ಘಟನೆ ಹಾರ್ನಳ್ಳಿಯಲ್ಲಿ ನಡೆದಿದೆ. ಮಂಜುನಾಥ (38) ಮೃತಪಟ್ಟವರು. ಇವರು ಎತ್ತಿನ ಗಾಡಿ ಓಡಿಸಿಕೊಂಡು ಹೋಗುತ್ತಿದ್ದಾಗ ಭಯಗೊಂಡು ಎತ್ತುಗಳು ಏಕಾಏಕಿ ಓಡಲಾರಂಭಿಸಿವೆ. ಮಂಜುನಾಥ ನಿಯಂತ್ರಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ಘಟನೆ ಸಂಭವಿಸಿದೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.
ಇಸ್ಪೀಟ್ ಅಡ್ಡೆಗೆ ದಾಳಿ
ಶಿವಮೊಗ್ಗ: ನಗರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದೊಪಲೀಸರು ಸುಮಾರು 93 ಜನರನ್ನು ಬಂಧಿಸಿದ ಘಟನೆ ನಡೆದಿದೆ. ಇಲ್ಲಿನ ಖಾಸಗಿ ಕ್ಲಬ್ವೊಂದರಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು ಕಾಜಿ ಬಾಬೀರ್ ಪಾಶ ಸೇರಿದಂತೆ 88 ಜನರನ್ನು ಬಂಧಿಸಿದ್ದಾರೆ.