25 ರಂದು ಹುಚ್ಚೂರಾಯಸ್ವಾಮಿ ಬ್ರಹ್ಮರಥ
ಕ.ಪ್ರ.ವಾರ್ತೆ, ಶಿಕಾರಿಪುರ, ಏ.21
ಇತಿಹಾಸ ಪ್ರಸಿದ್ಧ ಹುಚ್ಚೂರಾಯಸ್ವಾಮಿ ಬ್ರಹ್ಮರಥೋತ್ಸವ ಏ.25 ರ ಗುರುವಾರದಂದು ನಡೆಯಲಿದೆ ಎಂದು ತಾಲೂಕು ದಂಡಾಧಿಕಾರಿ ಪಿ.ಐ ಗಣಾಚಾರಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಕಳೆದ ಹಲವು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಶಿಕಾರಿಪುರದ ಹುಚ್ಚೂರಾಯಸ್ವಾಮಿ ರಥೋತ್ಸವ ಚೈತ್ರ ಶುದ್ದ ದಶಮಿಯ ಶನಿವಾರದಿಂದ ಆರಂಭವಾಗಿದೆ.
ಸೋಮವಾರ ಬೆಳಗ್ಗೆ ಪಲ್ಲಕ್ಕಿ ಸೇವೆ, ಸಂಜೆ ಮಹಾಮಂಗಳಾರತಿ ನಡೆಯಲಿದೆ ಎಂದರು.
ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಗಜಾರೋಹಣ ಉತ್ಸವ, ಮಂಗಳವಾರ ಚೈತ್ರ ಶುದ್ಧ ತ್ರಯೋದಶಿ ಬೆಳಗ್ಗೆ ಪಲ್ಲಕ್ಕಿ ಸೇವೆ, ಸಂಜೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಚಕ್ರ ರಥೋತ್ಸವ ನಂತರ ಅಷ್ಟಾವಧಾನ ಸೇವೆ,ಬುಧವಾರ ಬೆಳಿಗ್ಗೆ ಪಲ್ಲಕ್ಕಿ ಸೇವೆ,ರಾತ್ರಿ ಪುಷ್ಪರಥೋತ್ಸವ ನಡೆಯಲಿದ್ದು, ಚೈತ್ರ ಶುದ್ಧ ಪೂರ್ಣಿಮೆಯ ಗುರುವಾರ ಬೆಳಗ್ಗೆ ಹುಚ್ಚೂರಾಯನ ಬ್ರಹ್ಮ ರಥೋತ್ಸವ, ಗಣಪತಿ ಪೂಜೆ, ಅಷ್ಟ ದಿಕ್ಪಾಲಕರ ಮಹಾಬಲಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ರಥೋತ್ಸವದಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಶುಕ್ರವಾರ ಸಂಜೆ ಮಹಾರಥ ನೆಲೆ ನಿಲ್ಲಲಿದ್ದು, ನಂತರದಲ್ಲಿ ಹುಚ್ಚೂರಾಯಸ್ವಾಮಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.