ಚು. ವೀಕ್ಷಕರಾಗಿ ಮಾವೋ ನೇಮಕ
ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಕ್ಷೇತ್ರದ ಖರ್ಚು ವೆಚ್ಚಗಳ ವೀಕ್ಷಕರಾಗಿ ಭಾರತೀಯ ಚುನಾವಣಾ ಆಯೋಗ ಐಆರ್ಎಸ್ ಅಧಿಕಾರಿ ಓ.ಎ. ಮಾವೋ ಅವರನ್ನು ನೇಮಕ ಮಾಡಿದೆ. ಭದ್ರಾವತಿಯ ವಿಐಎಸ್ಎಲ್ ಅತಿಥಿಗೃಹ ಕೊಠಡಿ ಸಂಖ್ಯೆ 26ರಲ್ಲಿ ವಾಸ್ತವ್ಯ ಹೂಡಿದ್ದು, ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಖರ್ಚುವೆಚ್ಚಗಳ ಬಗ್ಗೆ ಮಾಹಿತಿ ನೀಡುವುದಿದ್ದಲ್ಲಿ ಅತಿಥಿ ಗೃಹದಲ್ಲಿ ಪ್ರತಿದಿನ ಸಂಜೆ 5ರಿಂದ 6ವರೆಗೆ ಭೇಟಿಯಾಗಬಹುದು. ಮಾಹಿತಿಗೆ 94487 54280, 08282- 263466 ಇಲ್ಲಿಗೆ ಸಂಪರ್ಕಿಸಿ ದೂರು ಸಲ್ಲಿಸಬಹುದು. ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರಾಗಿ ರವೀಂದ್ರ ನಾಯ್ಕ್ (9448259134) ಅಥವಾ ಸಮನ್ವಯಾಧಿಕಾರಿ ರಾನ್ಜಿ ನಾಯ್ಕ್- 9480092738 ಸಂಪರ್ಕಿಸಿ.
'ಬಿಎಸ್ವೈ ಜೈಲು ಸೇರಲು ಪುತ್ರರು, ರೇಣು ಕಾರಣ'
ಹೊನ್ನಾಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುತ್ರರಾದ ಬಿ.ವೈ. ರಾಘವೇಂದ್ರ, ವಿಜೇಯೇಂದ್ರ ಹಾಗೂ ಮಾನಸ ಪುತ್ರ ಎಂದೇ ಗುರುತಿಸಿಕೊಂಡ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಂತಹ ಹಿಂಬಾಲಕರ ಮಿತಿಮೀರಿದ ಭ್ರಷ್ಟಾಚಾರಗಳಿಂದಾಗಿ ಸಿಬಿಐ ತನಿಖೆಗೆ ಒಳಗಾಗಿ ನಂತರ ಜೈಲು ಸೇರಬೇಕಾದ ಪರಿಸ್ಥಿತಿಯನ್ನು ಅವರೇ ತಂದುಕೊಂಡರು ಎಂದು ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು. ಭಾನುವಾರ ತಾಲೂಕಿನ ಸಾಸ್ವೇಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥ ಡಾ. ರಾಜ್ಕುಮಾರ್ ಪರ ಚುನಾವಣಾ ಪ್ರಚಾರ ಭಾಷದಲ್ಲಿ ಮಾತನಾಡಿದ ಅವರು ಬಿ.ಎಸ್. ಯಡಿಯೂರಪ್ಪ ಅವರು ,ಅವರ ಪುತ್ರರು ಹಾಗೂ ನಂಬಿಕಸ್ಥರಿಂದಲೇ ಜೈಲು ಸೇರಿ ಅಧಿಕಾರ ಕಳೆದುಕೊಂಡರೇ ವಿನಃ ಯಾವ ಬಿಜೆಪಿ ವರಿಷ್ಠರು ಹಾಗೂ ಮುಖಂಡರಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು
ಅನಾಹುತ ಕಾದಿದೆ: ಅಂದು ಗಣಿ ರೆಡ್ಡಿಗಳೊಂದಿಗೆ ಸೇರಿಕೊಂಡು ಯಡಿಯೂರಪ್ಪ ಅವರ ವಿರುದ್ಧ ಬಂಡಾಯದ ಬಿರುಗಾಳಿ ಎಬ್ಬಿಸಿ ರೆಸಾರ್ಟ್ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿ ಯಡಿಯೂರಪ್ಪ ಅವರನ್ನು ವಾಚಾಮಗೋಚರವಾಗಿ ನಿಂದಿಸಿದ ರೇಣುಕಾಚಾರ್ಯ ಹಾಗೂ ಬಿ.ಪಿ.ಹರೀಶ್ ಅದೇ ಬಿಜೆಪಿ ಸರ್ಕಾರಿಂದ ಸಾಕಷ್ಟು ಲಾಭ ಪಡೆದುಕೊಂಡು ಇದೀಗ ಕೆಜೆಪಿ ಸೇರಿ ಪುನಃ ಯಡಿಯೂರಪ್ಪನವರ ಬೆನ್ನು ಬಿದ್ದಿದ್ದಾರೆ. ಇಂತಹ ಮಹಾ ಪುರುಷರನ್ನು ಬೆನ್ನಗೆ ಕಟ್ಟಿಕೊಂಡ ಬಿ.ಎಸ್.ಯಡಿಯೂರಪ್ಪನವರಿಗೆ ಮುಂದೆ ಯಾವ ಅನಾಹುತ ಕಾದಿದೆಯೋ ಚುನಾವಣೆಯ ನಂತರವೇ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ ಎಂದು ಹೇಳಿದರು. ಭದ್ರಾ ಕಾಡಾ ಅಧ್ಯಕ್ಷ ಗಿರೀಶ್ ಪಾಟೀಲ್ ಮಾನತಾಡಿ, ತಮ್ಮ ಆಧಿಕಾರಾವಧಿಯಲ್ಲಿ ಕೂಡ ಈ ತಾಲೂಕಿಗೆ ಸಾಕಷ್ಟು ಅನುದಾನ ತಂದಿದ್ದು, 1964ರಿಂದ ನೆನೆಗುದಿಗೆ ಬಿದ್ದಿದ್ದ ರಾಂಪುರ - ಗೋವಿನಕೋವಿ ಸೇತುವೆ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ. ಎಂ.ಪಿ. ರೇಣುಕಾಚಾರ್ಯ ತಾಲೂಕಿನಲ್ಲಿ ಏನೇ ಅಭಿವೃದ್ದಿ ಮಾಡಿದ್ದರೂ ಅದು ಬಿಜೆಪಿ ಸರ್ಕಾರದ ಕೂಡುಗೆಯೇ ಹೊರತು ಇವರದ್ದಲ್ಲ ಎಂದರು.