ಜಾನುವಾರು ನಿರ್ವಹಣೆಗೆ ಮನವಿ
ಕ.ಪ್ರ.ವಾರ್ತೆ, ಸೊರಬ, ಏ.21
ದೇಶದ ಬೆನ್ನೆಲುಬು ಕೃಷಿ, ಕೃಷಿಗೆ ಪೂರಕವಾಗಿ ದೇಸಿ ಗೋವುಗಳು ಎಂದು ಮನಗಂಡ ನಮ್ಮ ಹಿಂದಿನ ಪ್ರಾಜ್ಞರು ಗೋವಿಗೆ ದೇವರ ಸ್ಥಾನ ನೀಡಿ, ಪೋಷಿಸಿದ್ದರು ಎಂದು ತಾಲೂಕು ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನಮಠದ ಶಿವಾನಂದ ಶಿವಾಚಾರ್ಯ ಶ್ರೀ ತಿಳಿಸಿದರು.
ತಮ್ಮ ಮಠದ ಸುರಭಿ ಗೋಶಾಲೆಯಲ್ಲಿ ಮಾತನಾಡಿ, ಗೋವಿನ ಬಗ್ಗೆ ಅಪರಿಮಿತ ಮಹತ್ವವಿರುವ ಹಿನ್ನೆಲೆಯಲ್ಲಿ ಈ ಮಠದಲ್ಲಿ ಕೆಲವರ್ಷದಿಂದ ಗೋಶಾಲೆ ನಿರ್ಮಿಸಿ ದೇಸಿ ತಳಿಗಳನ್ನು ಸಾಕಲಾಗುತ್ತಿದೆ. ತಾಲೂಕಿನ ಹಲವು ಹಳ್ಳಿಗಳವರು ಜಾನುವಾರು ನಿರ್ವಹಣೆ ಕಷ್ಟದಾಯಕವಾಗಿರುವ ಹಿನ್ನೆಲೆಯಲ್ಲಿ ಮಠಕ್ಕೆ ಕಳುಹಿಸುತ್ತಿದ್ದಾರೆ. ಆದರೆ ಈಗ ಮಠದಲ್ಲಿನ ಗೋಗಾಹಿಗಳು ಬೇರೆಬೇರೆ ಕಾರಣದಿಂದ ಶಾಶ್ವತವಾಗಿ ನಿಲ್ಲುತ್ತಿಲ್ಲವಾದ್ದರಿಂದ ಜಾನುವಾರು ನಿರ್ವಹಣೆ ಮಠಕ್ಕೆ ಹೊರೆಯಾಗಿದೆ ಎಂದರು.
ಕಾರ್ಮಿಕರ ಕೊರತೆ: ಕೂಲಿ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಇರುವ ಜಮೀನನ್ನು ಕೃಷಿ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ಮೇವಿನ ಕೊರತೆ ಆಗಿದೆ, ಪ್ರಸಕ್ತ ಉತ್ತರ ಕರ್ನಾಟಕ ಭಾಗದಿಂದ ಮೇವು ತರಿಸುವ ಅನಿವಾರ್ಯತೆಯಿಂದಾಗಿ ದುಬಾರಿ ಆರ್ಥಿಕ ವೆಚ್ಚ ಭರಿಸಬೇಕಿದೆ ಎಂದು ತಮ್ಮ ಬವಣೆ ತೋಡಿಕೊಂಡ ಅವರು ಜಾನುವಾರು ಬಗ್ಗೆ ಶ್ರದ್ಧೆ, ಗೌರವ ಇರುವವರು ತಮ್ಮ ಕುಟುಂಬದೊಂದಿಗೆ ಇಲ್ಲಿ ಇದ್ದು, ಜಾನುವಾರುಗಳ ನಿಗಾ ನೋಡುವುದಿದ್ದಲ್ಲಿ ಅವರ ಸಂಸಾರದ ನಿರ್ವಹಣೆ ವೆಚ್ಚವನ್ನು ಮಠವು ಭರಿಸಲಿದೆ ಎಂದರು.
ಮಠಕ್ಕೆ 20 ಎಕರೆ ಖುಷ್ಕಿ ಜಾಗವಿದ್ದು, ಆವರಣ ಭದ್ರಗೊಳಿಸುವ ಮೂಲಕ ಜಾನುವಾರುಗಳಿಗೆ ಮುಕ್ತ ಮೇವು ಪಡೆಯುವಂತೆ ಯೋಜಿಸಲಾಗುತ್ತಿದೆ. ಇಲ್ಲಿಗೆ ಬಂದ ಹಲವು ಬರಡು ಗೋವುಗಳು ಕರು ಹಾಕಿದ್ದು, ಅವು ಆರೋಗ್ಯಕರವಾಗಿ ಬೆಳೆಯುತ್ತಿವೆ ಎಂದರು.
ಗೋಶಾಲೆಯ ಜಾನುವಾರು ಸಂಖ್ಯೆ ಹೆಚ್ಚಿಸುವ ಮುನ್ನ ಇನ್ನಷ್ಟು ಪೂರಕ ಸೌಲಭ್ಯ ವ್ಯವಸ್ಥೆಗೊಳಿಸಿ, ನಂತರ ಜಾನುವಾರುಗಳನ್ನು ಅಪೇಕ್ಷಿಸಲಾಗುತ್ತದೆ.
ಮಾಹಿತಿಗಾಗಿ ಮಠದ ದೂರವಾಣಿ ಸಂಖ್ಯೆ ಮೊ. 9379878785, ಅಥವಾ ಗೋಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಅವರನ್ನು ಮೊ. 9740934555 ಮೂಲಕ ಸಂಪರ್ಕಿಸಬಹುದು ಎಂದಿದ್ದಾರೆ.
--