'ನನಸಾಗದ ಅಂಬೇಡ್ಕರ್ ಕನಸು'
ಕ.ಪ್ರ.ವಾರ್ತೆ, ಜೋಗ್ಫಾಲ್ಸ್, ಏ.21
ದೇಶ ಕಂಡ ಮಹಾನ್ ವ್ಯಕ್ತಿ, ಸಂವಿಧಾನ ರಚನೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಕಂಡ ಏಕೀಕೃತ, ಭ್ರಷ್ಟಾಚಾರ ಮುಕ್ತ ಭಾರತದ ಕನಸು ಇಂದಿಗೂ ನನಸಾಗದಿರುವುದು ವಿಷಾದನೀಯ ಎಂದು ಸಾಗರ ತಾಲೂಕು ಶಿಕ್ಷಣ ಇಲಾಖೆ ಪ್ರಭಾರ ಸಮನ್ವಯಾಧಿಕಾರಿ ಶಂಕರ್ ಶಾಸ್ತ್ರಿ ಹೇಳಿದರು.
ಅವರು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕವಿನಿನಿ ಪ.ಜಾ, ಪ.ಪಂಗಡಗಳ ಸಂಯುಕ್ತ ಆಶ್ರಯದಲ್ಲಿ ಮಹಾಗಣಪತಿ ಸಮುದಾಯ ಭವನದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಚಾಕಚಕ್ಯತೆ: ಇಂದು ಭಾರತದಲ್ಲಿ ಜನಾಂಗೀಯ ಮೇಲು, ಕೀಳು ಎಂಬ ಭಾವನೆ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದರೂ ಆರ್ಥಿಕ ಸಬಲ, ದುರ್ಬಲ ಎಂಬ ವರ್ಗಗಳು ಸೃಷ್ಟಿಯಾಗಿದ್ದು, ಸಬಲರು ತಮ್ಮ ಚಾಕಚಕ್ಯತೆಯಿಂದ ಸುಮಾರು 450 ಕ್ಕೂ ಹೆಚ್ಚು ವಿದೇಶೀ ಕಂಪನಿಗಳನ್ನು ಭಾರತಕ್ಕೆ ತರುವ ಮೂಲಕ ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಶರಾವತಿ ಯೋಜನಾ ಪ್ರದೇಶದ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ವಹಿಸಿದ್ದರು. ನಿಗಮದ ಹಣಕಾಸು ವಿಭಾಗದ ಉಪಪ್ರಧಾನ ಪ್ರಬಂಧಕ ಬಿ. ನಿಜೇಂದ್ರ, ಕವಿನಿನಿ ಪ.ಜಾ, ಪ.ಪಂಗಡಗಳ ಸಹ ಕಾರ್ಯದರ್ಶಿ ಆರ್. ನಿಂಗರಾಜು ಹಾಜರಿದ್ದರು. ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ವಸಂತಾ ಪ್ರಾರ್ಥಿಸಿ, ಬಿ. ವಿಜಯ ನಿರ್ಮಲ ಸ್ವಾಗತಿಸಿದರು. ಬಿ. ವಿಜಯ ಕುಮಾರ್ ನಿರೂಪಿಸಿದರು. ಎನ್. ಉದಯ ನಾಯ್ಕ ವಂದಿಸಿದರು.