ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪೌರಾಣಿಕ ಕಥೆ ನೆನಪಿಸುವ ಮಂಚಿ ಜಾತ್ರೆ

Lingaraj Badiger
Updated On : 22 Apr 2013, 11:29 am

ಕ.ಪ್ರ.ವಾರ್ತೆ, ಸೊರಬ, ಏ.21
ಸಂಜೀವಿನಿ ತಂದಂತಹ ವೀರ ಆಂಜನೇಯನ ಪೌರಾಣಿಕ ಕಥೆ  ನೆನಪಿಸುವ, ಧಾರ್ಮಿಕ ಚೌಕಟ್ಟಿನಡಿಯಲ್ಲಿ ನಡೆಯುವ ವಿಶೇಷ ಸಾಹಸ ಪ್ರದರ್ಶನ ಕಾರ್ಯಕ್ರಮ ತಾಲೂಕಿನ ಮಂಚಿಯಲ್ಲಿ ಪ್ರತಿವರ್ಷ ವಸಂತ ಋತುವಿನ ಚೈತ್ರಶುದ್ಧ ದಶಮಿಯಂದು ನಡೆಯುತ್ತದೆ.
 ಇಲ್ಲಿನ ಆಂಜನೇಯ ದೇವರ ರಥೋತ್ಸವ, ಉತ್ಸವಾದಿ ಅಷ್ಟಮಿಯಿಂದಲೇ ಆರಂಭಗೊಂಡು, ಉಪವಾಸ ವ್ರತದ ಮೂಲಕ ಸಂಕಲ್ಪ ಮಾಡಿಕೊಂಡ ಇಲ್ಲಿನವರೇ ಆದ ಒಂದು ದಾಸರ ಕುಟುಂಬದವರು ಬೇರು ಸಹಿತ ಮರ ತರಲು ಬೆಳ್ಳಂಬೆಳಿಗ್ಗೆಯೇ ತೆರಳುತ್ತಾರೆ. ಮಧ್ಯಾಹ್ನ 4-5 ರೊಳಗೆ ಮರ ತರುತ್ತಾರೆ. ಈ ಮರ ತರುವ ಸಮಯ, ತರುವ ಮಾರ್ಗ, ಮರಗಳ ಸ್ಥಿತಿ, ಹೊತ್ತು ತರುವ ದಿಕ್ಕು ಇತ್ಯಾದಿ ಗಮನಿಸಿ ವರ್ಷದ ಮಳೆ ಬೆಳೆ ಗುರುತಿಸಿಕೊಳ್ಳುವ ವಾಡಿಕೆ ಸಾಮಾನ್ಯವಾಗಿದೆ.
ಹಣ್ಮಿಣಿ ಸೇವೆ: ಮರ ತಂದ ಬಳಿಕ ಭಕ್ತಾದಿಗಳು ಆಂಜನೇಯನಿಗೆ ಬಾಳೆಹಣ್ಣು, ವಿವಿಧ ಸತ್ವಭರಿತ ಆಹಾರ ಪದಾರ್ಥಗಳನ್ನು ನೀಡಿ ಸತ್ಕರಿಸುವ ಹಣ್ಮಿಣಿ ಸೇವೆಯೂ ಜರುಗುತ್ತದೆ.
 ಪ್ರಸಕ್ತವರ್ಷ ಕಿತ್ತು ತಂದ 3 ಮರಗಳು ಚಿಗುರು ಆಗಿದ್ದು, ಉಳಿದ 3 ಮರಗಳು ತುಸು ಒಣಗಿದ್ದರಿಂದ ಸಾಧಾರಣ ಮಳೆ, ಬೆಳೆ ಎಂಬ ತೀರ್ಮಾನ ಇಲ್ಲಿನ ಕೃಷಿಕರದ್ದು. ಇಲ್ಲಿನ ದಾಸರ ಕುಟುಂಬದ ಪುಟ್ಟಪ್ಪ, ಮಾರುತಿ, ಗುತ್ಯಪ್ಪ, ಗೋಪಾಲಪ್ಪ, ಸುಭಾಷ್, ಪರಶುರಾಮ ಮರಕಿತ್ತು ತಂದರು, ರಾಮಪ್ಪ ಪುರಾಣದ ಹಿನ್ನೆಲೆಯನ್ನು ವಡಚಿದರು.
 ಹಣ್ಮಿಣಿ ಸೇವೆಯಲ್ಲಿ ಹರಗಿ ಗ್ರಾಮದ ನಿರ್ವಣೆ ಕುಟುಂಬದ ದೇಸಪ್ಪ, ಮಾರುತಿ, ವಿರೂಪಾಕ್ಷಪ್ಪ, ಏಕಾಂತಪ್ಪ, ನೆಹರು, ವಾಸಪ್ಪ, ಮುಕುಂದಪ್ಪ, ಬಂಗಾರಪ್ಪ, ಹುಚ್ಚಪ್ಪ, ಕೃಷ್ಣಪ್ಪ, ಮಲ್ಲೇಶಪ್ಪ, ಈಶಪ್ಪ, ಕೋರಪ್ಪ, ನಟರಾಜ ಮೊದಲಾದವರು ಇದ್ದರು.
 ಅಭಿವೃದ್ಧಿ ಕಾಣದ ಮಂಚಿ: ಪ್ರಚಾರದಿಂದಾಗಿ ದಿನದಿಂದ ದಿನಕ್ಕೆ  ನೋಡುಗರ ಸಂಖ್ಯೆ ಲಕ್ಷ ತಲುಪಿದ್ದು, ಮಂಚಿ ಜಾತ್ರೆಗೆ ತೆರಳಲು ಇಂದಿಗೂ ಉತ್ತಮ ಮಾರ್ಗವಿಲ್ಲ, ಆಂಜನೇಯ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಪ್ರಸ್ತುತ ಅರೆಬರೆ ಅಭಿವೃದ್ಧಿ ಕೆಲಸವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಜಾತ್ರೆ ವೇಳೆ ಉಲ್ಬಣಿಸಿದೆ. ತಾಲೂಕಿನ ವಿಶೇಷ ಪರಿಶೆಯ ಕ್ಷೇತ್ರವಾಗಿದ್ದರೂ, ರಾಜಕಾರಣಿಗಳು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸದಿರುವುದು ಗ್ರಾಮಸ್ಥರಿಗೆ ಮತ್ತು ಜಾತ್ರೆಗೆ ತೆರಳುವ ಹಲವರಲ್ಲಿ ಬೇಸರವಿದೆ.
 ಚುನಾವಣೆ ನೀತಿ ಸಂಹಿತೆ ಅನ್ವಯ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಜಾತ್ರೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement