ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.22 ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೂ, ಇಲ್ಲಿಯವರೆಗೂ ಅವರನ್ನು ಬಂಧಿಸದಿರುವ ಪೊಲೀಸ್ ಇಲಾಖೆ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪಿಸಿದೆ ಜೊತೆಗೆ, ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಕೆ. ದಿವಾಕರ್, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಕೆಜೆಪಿ ಅಭ್ಯರ್ಥಿಯನ್ನು ಬಂಧಿಸಲಾಗಿದೆ.
ಆದರೆ ಈಶ್ವರಪ್ಪ ಕೋಮುದ್ವೇಷ ಕೆರಳಿಸುವ ಭಾಷಣ ಮಾಡಿದ ಆರೋಪದ ಮೇಲೆ ಕೋಟೆ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಾಗಿ ಹಲವು ದಿನ ಉರುಳಿದರೂ ಅವರನ್ನು ಬಂಧಿಸಿಲ್ಲ. ಜಾಮೀನು ರಹಿತ ಪ್ರಕರಣ ಇದಾಗಿದ್ದು, ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಆಪಾದಿಸಿದರು.
ಚುನಾವಣಾ ಪ್ರಚಾರ: ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಕೆ.ಎಸ್. ಈಶ್ವರಪ್ಪನವರು ಬಂಧನಕ್ಕೆ ಸಿಗುತ್ತಿಲ್ಲ, ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.
ಆದರೆ ಪೊಲೀಸ್ ಭದ್ರತೆಯಲ್ಲಿಯೇ ಈಶ್ವರಪ್ಪ ಶಿವಮೊಗ್ಗ ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದು ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಷ್ಪಕ್ಷಪಾತ ಚುನಾವಣೆಯಾಗಬೇಕೆಂದರೆ ಈಶ್ವರಪ್ಪ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕು.
ಕೋಟೆ ಠಾಣೆಯ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಯನ್ನೂ ವರ್ಗಾಯಿಸಬೇಕು ಎಂಬುದು ಚುನಾವಣಾ ಆಯೋಗಕ್ಕೆ ಪಕ್ಷದ ಒತ್ತಾಯ ಎಂದರು.
ಬೆಂಬಲಕ್ಕೆ ನಿಂತ ಅಧಿಕಾರಿಗಳು: ಕೋಟೆ ಪೊಲೀಸ್ ಠಾಣೆ ಅಧಿಕಾರಿಗಳು, ತಹಸೀಲ್ದಾರ್ ಕೊಟ್ರೇಶ್, ಬಿಇಒ ಟಿ.ಎನ್. ಕಮಲಾಕರ್, ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಡಾ. ಶ್ರೀಧರ್, ಡಾ.ತೇಜಸ್ ಹಾಗೂ ಡಾ. ಕಲ್ಲಪ್ಪನವರು ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಸರ್ಕಾರಿ ವಾಹನಗಳನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಈ ಕೂಡಲೇ ಈ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ದಿವಾಕರ್ ಒತ್ತಾಯಿಸಿದರು.
ಕೆ.ಎಸ್. ಈಶ್ವರಪ್ಪಗೆ ಸಹಕರಿಸುತ್ತಿರುವ ಶಿವಮೊಗ್ಗದ ಪೊಲೀಸ್ ಹಾಗೂ ಇತರೆ ಇಲಾಖೆ ಅಧಿಕಾರಿಗಳ ವರ್ಗಾವಣೆ ಮಾಡಬೇಕು. ನೀತಿ ಸಂಹಿತೆ ಉಲ್ಲಂಘಿಸಿ ಕೋಮು ಪ್ರಚೋದಕ ಭಾಷಣ ಮಾಡಿದ ಈಶ್ವರಪ್ಪನವರನ್ನು ತಕ್ಷಣವೇ ಬಂಧಿಸಬೇಕು. ಜಿಲ್ಲಾ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳದಿದ್ದರೆ ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಸಿದರು.
ವಿಶೇಷಾಧಿಕಾರಿ ವಿರುದ್ಧವೂ ದೂರು: ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಾಥ್ ನಗರಗದ್ದೆ ಗುತ್ತಿಗೆ ಆಧಾರದ ನೌಕರರಾಗಿದ್ದು, ಇವರನ್ನು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವಂತೆ ಚುನಾವಣಾ ಆಯೋಗ ಸೂಚಿಸಬೇಕು ಎಂದು ಕೆ. ದಿವಾಕರ್ ಆಗ್ರಹಿಸಿದರು.
ಶ್ರೀನಾಥ್ ನಗರಗದ್ದೆಯವರು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರವನ್ನೂ ನಡೆಸುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಚುನಾವಣಾ ಆಯೋಗದ ವೀಕ್ಷಕರಿಗೂ ದೂರು ನೀಡಲಾಗುವುದು ಎಂದರು.
ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ವಿಶೇಷಾಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಈ ರೀತಿಯ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬೆಂಗಳೂರು ಬಿಟ್ಟುಹೋಗದಂತೆ ನಿಯಮವಿದ್ದರೂ ಶ್ರೀನಾಥ್ ನಗರಗದ್ದೆ ಶಿವಮೊಗ್ಗದಲ್ಲೇ ಇದ್ದು ಈಶ್ವರಪ್ಪ ಪರವಾಗಿ ಪ್ರಚಾರ ನಡೆಸಿದ್ದಾರೆ ಎಂದು ಟೀಕಿಸಿದರು.