ಕುಂಭಕರ್ಣ ಪ್ರಜಾಪ್ರಭುತ್ವ: ದೊರೆಸ್ವಾಮಿ ಆಕ್ರೋಶ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.22
ಪ್ರಸ್ತುತ ನಮ್ಮದು ಕುಂಭಕರ್ಣ ಪ್ರಜಾಪ್ರಭುತ್ವವಾಗುತ್ತಿದೆ. ಐದು ವರ್ಷ ಕುಂಭಕರ್ಣನಂತೆ ಮಲಗಿ ಚುನಾವಣೆ ಬಂದಾಗ ಎಚ್ಚೆತ್ತುಕೊಳ್ಳುವ ಇಂತಹ ಪ್ರಜೆಗಳನ್ನು ಹೊಂದಿರುವ ದೇಶದಲ್ಲಿ ನಿಜವಾಗಿಯೂ ಕುಂಭಕರ್ಣ ಪ್ರಜಾಪ್ರಭುತ್ವ ಮನೆ ಮಾಡಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಎಸ್.ಆರ್. ನಾಗಪ್ಪಶೆಟ್ಟಿ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು, ಚುನಾವಣೆಯಲ್ಲಿ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರ, ನಂತರ ಸರ್ಕಾರ ಸರಿಯಾಗಿ ಕೆಲಸ ಮಾಡದಿದ್ದಾಗ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಳ್ಳದಿರುವುದೇ ಪ್ರಜಾಪ್ರಭುತ್ವದಲ್ಲಿ ಅವ್ಯವಸ್ಥೆ ಹೆಚ್ಚಾಗಲು ಕಾರಣ ಎಂದು ಆಪಾದಿಸಿದರು.
ಮತದಾರ ಜಾಗೃತ: ಚುನಾವಣೆಯಿಂದ ಚುನಾವಣೆಗೆ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಮತದಾರ ಜಾಗೃತನಾಗದಿದ್ದರೆ, ತನ್ನ ಹಕ್ಕು ಬಾಧ್ಯತೆಗಳನ್ನು ಪಡೆದುಕೊಳ್ಳುವ ಪ್ರಯತ್ನ ಮಾಡದಿದ್ದರೆ ದೇಶದಲ್ಲಿ ಉತ್ತಮ ಪ್ರಜಾಪ್ರಭುತ್ವ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದರು.
ಉತ್ತಮ ರಾಜಕೀಯ: ಮೊದಲು ಒಬ್ಬ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸದನೆಂದರೆ ಆತನ ವರ್ಚಸ್ಸು, ಅಭಿವೃದ್ಧಿ ಕಾರ್ಯಗಳನ್ನು ನೋಡಿ ಚುನಾಯಿಸಲಾಗುತ್ತಿತ್ತು. ಅಲ್ಲದೇ, ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪರವರಂತ ಉತ್ತಮ ರಾಜಕೀಯ ಮುಖಂಡರು ಕರಪತ್ರ ಹಂಚಿ, ಪಾದಯಾತ್ರೆ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಇದೀಗ ಚುನಾವಣೆಯಲ್ಲಿ ಹಣ, ಹೆಂಡ, ಸೀರೆಗಳನ್ನು ಹಂಚಿ ಚುನಾಯಿತರಾಗುತ್ತಿರುವುದು ಖಂಡನೀಯ ಎಂದರು.
ಜನ ಲೋಕಪಾಲ್ ಮಸೂದೆ: ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಕುರಿಗಳಾಗಿದ್ದಾರೆ. ಚುನಾಯಿತ ಅಭ್ಯರ್ಥಿಗಳು ಹುಲಿಗಳಾಗಿದ್ದಾರೆ ಎಂದು ಲೇವಡಿ ಮಾಡಿದ ದೊರೆಸ್ವಾಮಿ ಅವರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು ಭ್ರಷ್ಟನಾಗಿರುವುದರಿಂದ ಜನ ಲೋಕಪಾಲ್ ಮಸೂದೆ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ಕೇವಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವದಷ್ಟೇ ನಿಮ್ಮ ಕೆಲಸ ಉಳಿದದ್ದನು ಜನಪ್ರತಿನಿಧಿಗಳೇ ಮಾಡುತ್ತಾರೆ ಅಲ್ಲವೇ ಎಂದು ನಮ್ಮನ್ನೇ ಪ್ರಶ್ನಿಸಿರುವುದು ವಿಷಾದನೀಯ ಎಂದರು.
ಕಾದಾಟ: ನಮ್ಮ ಕಾಲಕ್ಕಿಂತ ಈ ಕಾಲದವರು ಹೆಚ್ಚು ಕೆಲಸ ಮಾಡುತ್ತಾರೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಇಂದು ಅಧಿಕಾರಕ್ಕಾಗಿ ಹಂಬಲಿಸುತ್ತಾ ಜಗಳ, ಕಾದಾಟ ಮಾಡಿಕೊಳ್ಳುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಿದ್ದಾರೆ ಎಂದ ಅವರು, ಹಂದಿಗಳು ಗಟಾರದಲ್ಲಿ ಈಜಾಡುವಂತೆ ಇಂದು ರಾಜಕೀಯ ಮುಖಂಡರು ಕಿತ್ತಾಡುತ್ತಿದ್ದಾರೆ
ಎಂದು ಆಪಾದಿಸಿದರು.
ಜನಪ್ರತಿನಿಧಿಗಳು ವಿಧಾನಸಭೆ, ಲೋಕಸಭೆಗಳಂತ ಪವಿತ್ರ ಸ್ಥಳಗಳನ್ನು ಅಪವಿತ್ರ ಮಾಡಬೇಡಿ ಎಂದು ಆಗ್ರಸಿದರು. ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಉಪನ್ಯಾಸಕರು ಪಾಠ ಪ್ರಾರಂಭಿಸುವ ಮೊದಲು ವಿದ್ಯಾರ್ಥಿಗಳಿಗೆ ದೇಶದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ತಿಳಿಸುವುದು ಸೂಕ್ತ. ಇದ್ದರಿಂದ ಗಾಂಧಿ, ನಾಗಪ್ಪಶೆಟ್ಟಿ ಅವರಂತಹ ಮಹಾನ್ ವ್ಯಕ್ತಿಗಳ ಶ್ರಮಕ್ಕೆ ಬೆಲೆ ಸಿಗುತ್ತದೆ ಎಂದರು. ಇದೇ ವೇಳೆ ಗಾಂಧಿಜೀ ಅವರು ನಡೆದು ಬಂದ ಹಾದಿ ಕುರಿತಂತೆ ಛಾಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ನಾಗಪ್ಪಶೆಟ್ಟಿ ಅವರ ಪತ್ನಿ ಎಸ್.ಆರ್. ಸುಶೀಲಮ್ಮ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ. ನಂಜುಂಡಪ್ಪ, ಉಪಾಧ್ಯಕ್ಷ ಜಿ.ಎಸ್. ನಾಗರಾಜ್, ಬೆಂಗಳೂರಿನ ಆರ್.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಕೆ. ಪಾಡುರಂಗ ಶೆಟ್ಟಿ, ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಇದ್ದರು.