ಕೈಕೊಟ್ಟ ವಿದ್ಯುತ್, ಜನರ ಬಳಿ ಸಾಗಿದ ರಾಜನಾಥ ಸಿಂಗ್
ಶಿವಮೊಗ್ಗ: ಪ್ರಣಾಳಿಕೆಯಲ್ಲಿ ದಿನದ 24 ಗಂಟೆ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿರುವ ಬಿಜೆಪಿ ತನ್ನದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಮಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಕೈಕೊಟ್ಟು ಸುಮಾರು ಅರ್ಧ ಗಂಟೆ ಕಾಲ ಬಿಜೆಪಿ ಮುಖಂಡರು ತೀವ್ರ ಮುಜುಗರ ಅನುಭವಿಸಿದ ಘಟನೆ ಸಾಗರದಲ್ಲಿ ಸೋಮವಾರ ಸಂಜೆ ನಡೆಯಿತು.
ಬಿಜೆಪಿ ಕಾರ್ಯಕ್ರಮವೆಂದರೆ ಶಿಸ್ತುಬದ್ಧ ವ್ಯವಸ್ಥಿತ ಕಾರ್ಯಕ್ರಮವೆಂದೇ ಹೆಸರು. ಆದರೆ ಸಾಗರದ ಕಾರ್ಯಕ್ರಮ ಈ ಹೆಸರಿಗೆ ಕಪ್ಪು ಚುಕ್ಕಿಯಾಗಿತ್ತು.
ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಯಿತು. ಎಲ್ಲಾ ಮುಖಂಡರೂ ಹಾಜರಿದ್ದರು. ಮೊದಲಿಗೆ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶರಾವತಿ ಸಿ. ರಾವ್ ಅವರು ಮಾತನಾಡಿದರು. ನಂತರ ಸೊರಬ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡರು ಮಾತನಾಡುತ್ತಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಧ್ವನಿವರ್ಧಕವಿಲ್ಲದೇ ನಾಗರಾಜಗೌಡರು ಮಾತನಾಡಿ ಮುಗಿಸಿದರು. ಆದರೂ ವಿದ್ಯುತ್ ಬರಲಿಲ್ಲ.
ಪರ್ಯಾಯವಾಗಿ ಮಾಡಿಕೊಂಡಿದ್ದ ಜನರೇಟರ್ ವ್ಯವಸ್ಥೆ ಕೈಕೊಟ್ಟಿತ್ತು. ಮುಖಂಡರಾದ ಆಯನೂರು ಮಂಜುನಾಥ್, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವರು ತಮ್ಮ ಸ್ಥಾನದಿಂದ ಎದ್ದು ಹೋಗಿ ಏನಾಯಿತೆಂದು ಪರಿಶೀಲಿಸಿದರು. ಎಷ್ಟು ಹೊತ್ತಾದರೂ ಸರಿಯಾಗದ ಕಾರಣ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ಶರಾವತಿ ಸಿ. ರಾವ್ ಅವರೊಂದಿಗೆ ವೇದಿಕೆಯಿಂದ ಕೆಳಗಿಳಿದು ಜನರ ಬಳಿ ಸಾಗಿದರು.
ರಾಜನಾಥ ಸಿಂಗ್ ಅವರು ಡಿ ಝೋನ್ನಿಂದ ಹೊರಹೋಗುತ್ತಿದ್ದಂತೆ ಇದರಿಂದ ಗಲಿಬಿಲಿಗೊಂಡ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹೆಣಗಾಡಬೇಕಾಯಿತು. ಸಭಾಂಗಣದ ನಡುವೆ ಅವರು ಸಾಗುತ್ತಿದ್ದಂತೆ ಕುರ್ಚಿಗಳನ್ನು ಸರಿಸಿ ದಾರಿ ಮಾಡಿಕೊಟ್ಟರು. ಸಾರ್ವಜನಿಕರ ಕೈಕುಲುಕುತ್ತಾ ಸಾಗಿದ ರಾಜನಾಥ ಸಿಂಗ್ ಬಿಜೆಪಿಗೇ ಮತ ನೀಡುವಂತೆ ಅವರಲ್ಲಿ ಕೋರಿದರು. ಆಯನೂರು ಮಂಜುನಾಥ್, ಈಶ್ವರಪ್ಪ ಹಾಗೂ ಬಿಜೆಪಿ ಮುಖಂಡರು ಅಸಹಾಯಕರಾಗಿ ನೋಡುತ್ತಿದ್ದರು.
ಅಷ್ಟರಲ್ಲೇ ಧ್ವನಿವರ್ಧಕಕ್ಕೆ ಜನರೇಟರ್ ಸಂಪರ್ಕ ದೊರೆಯಿತು. ನೇರವಾಗಿ ವೇದಿಕೆ ಏರಿದ ರಾಜನಾಥ ಸಿಂಗ್ ಅವರು ಭಾಷಣ ಆರಂಭಿಸಿದರು.