ಬಿಎಸ್ವೈ ಕುಟುಂಬದಿಂದ ಬಿಜೆಪಿಗೆ ಅನ್ಯಾಯ
ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಂದ ಬಿಜೆಪಿಗೆ ಅನ್ಯಾಯವಾಗಿದೆ. ಸಾವಿರಾರು ಕಾರ್ಯಕರ್ತರು ನೋವು ಅನುಭವಿಸುವಂತಾಗಿದೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ನೇರವಾಗಿ ಯಡಿಯೂರಪ್ಪ ಅವರ ಮಕ್ಕಳ ಮೇಲೆ ಹರಿಹಾಯ್ದರು.
ಸಾಗರದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು, ಯಡಿಯೂರಪ್ಪ ಹೋರಾಟಗಾರ. ಅವರ ದಾರಿ ತಪ್ಪಿಸಿದ್ದು ಅವರ ಮಕ್ಕಳೇ. ತಾವು ಮಾಡಿದ್ದು ತಪ್ಪು ಎಂದು ಯಾವ ಮಕ್ಕಳೂ ಹೇಳಲಿಲ್ಲ. ಸುಮ್ಮನೇ ಇದ್ದರು. ಯಡಿಯೂರಪ್ಪರನ್ನು ಜೈಲಿಗೆ ಕಳಿಸಿ ಇವರು ಹೊರಗಿದ್ದರು ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರ 35 ವರ್ಷದ ಹೋರಾಟವನ್ನು ಇವರು ಮೂರು ವರ್ಷದಲ್ಲಿ ಮಣ್ಣುಪಾಲು ಮಾಡಿದರು. ಜತೆಗೆ ಪಕ್ಷವನ್ನೂ ಹಾಳು ಮಾಡಿದರು. ಇದರಲ್ಲಿ ಶಿವಮೊಗ್ಗದ ಸಂಸದ ರಾಘವೇಂದ್ರ ಅವರೂ ಸೇರಿದ್ದಾರೆ. ಇವರಿಗೆ ಇಂತಹ ಅಧಿಕಾರವನ್ನು ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.