ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಕುತ್ತು

Rashmi Kasaragodu
Updated On : 23 Apr 2013, 11:38 am

ಶಿವಮೊಗ್ಗ: ರಾಜ್ಯ ಸರ್ಕಾರದ ವರ್ಚಸ್ಸಿಗೆ ಕುಂದುತರಲು ಕೇಂದ್ರ ಸರ್ಕಾರ ಹೊರಟಿದೆ ಎಂದು ರಾಜ್ಯ ಬಿಜೆಪಿ ನೇರವಾಗಿ ಆರೋಪಿಸಿದೆ.
ಚುನಾವಣಾ ಸಂದರ್ಭದಲ್ಲೇ ಪಡಿತರ ವಿತರಣೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದು, ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಏಪ್ರಿಲ್ ಹಾಗೂ ಮೇ ತಿಂಗಳ ವಿತರಿಸಲು ಪಡಿತರವನ್ನು ಕೇಂದ್ರ ಸರ್ಕಾರ ಕಡಿಮೆ ಕಳುಹಿಸಿದೆ. ಈ ಸಂಬಂಧ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದರೆ ಜೂನ್ ನಂತರ ವ್ಯವಸ್ಥೆ ಸರಿಯಾಗುತ್ತದೆ ಎಂದು ಉತ್ತರ ಬರುತ್ತದೆ. ಇದರರ್ಥ ಚುನಾವಣೆ ಸಂದರ್ಭದಲ್ಲಿ ಕಡಿಮೆ ಪಡಿತರ ಕಳುಹಿಸಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಜುಗರ ತರುವುದೇ ಉದ್ದೇಶವಾಗಿದೆ ಎಂದು ಟೀಕಿಸಿದರು.
ಅಕ್ಕಿ ಕಡಿತ: ರಾಜ್ಯದ ಪಾಲಿನ ಕೋಟ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 28 ಸಾವಿರ ಮೆಟ್ರಿಕ್ ಟನ್ ಅಕ್ಕಿ ಕಡಿತಗೊಳಿಸಿದೆ. ಅದೇ ರೀತಿ 10 ಸಾವಿರ ಮೆಟ್ರಿಕ್ ಗೋಧಿಯನ್ನು ಕಡಿಮೆ ಕಳುಹಿಸಿದೆ. ಇದರ ಬೆನ್ನಹಿಂದೆಯೇ ಸ್ಥಳೀಯ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ಕಡಿಮೆ ಪಡಿತರ ವಿತರಿಸುತ್ತಿದೆ ಎಂದು ಅಪಪ್ರಚಾರ ಆರಂಭಿಸುತ್ತಿದೆ. ಇನ್ನೊಂದೆಡೆ ಕರ್ನಾಟಕ ಹೊರತಾಗಿ ಉಳಿದೆಲ್ಲಾ ರಾಜ್ಯಗಳಿಗೆ ನಿಗದಿಯಾದಷ್ಟೇ ಪಡಿತರ ಬಿಡುಗಡೆಯಾಗಿದೆ, ಎಲ್ಲೂ ಖೋತ ಮಾಡಿಲ್ಲ ಎಂದು ಜೋಷಿ ವಿವರಿಸಿದರು.
ಅವಕಾಶವಾದಿ ರಾಜಕಾರಣ: ಅಕ್ಕಿ ಗೋಧಿ ಪೂರೈಕೆ ಕಡಿತಗೊಳಿಸಿ ಜನರ ಮುಂದೆ ರಾಜ್ಯ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ಆದರೆ, ಇಂತಹ ಅವಕಾಶವಾದಿ ರಾಜಕಾರಣಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದ ಅನೀತಿ: ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅಕ್ಕಿ ಗೋಧಿ ಸರಬರಾಜು ಏಕೆ ಕಡಿಮೆಗೊಳಿಸಲಾಯಿತು ಎಂದು ರಾಜ್ಯ ಸರ್ಕಾರ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಸರ್ಕಾರದ ಪತ್ರವನ್ನು ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಪ್ರಿಂಟ್ ಮಾಡಿ ಹಂಚಲಾಗುವುದು. ಆ ಮೂಲಕ ರಾಜ್ಯದ ಜನರಿಗೆ ಕೇಂದ್ರ ಸರ್ಕಾರದ ಅನೀತಿಯನ್ನು ಜನರಿಗೆ ತಿಳಿಸಲಾಗುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಪೂರೈಕೆ, ವಿದ್ಯುತ್ ಪೂರೈಕೆ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಪಾಲನ್ನು ವಿತರಿಸುವಲ್ಲಿ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಸಂಬಂಧ ಕೇಂದ್ರ ಅನುಸರಿಸುತ್ತಿರುವ ದಾಖಲೆಯನ್ನು ಶೀಘ್ರವೇ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದರು.
26ರಂದು ಕೇಂದ್ರ ನಾಯಕಿ ಸುಷ್ಮಾ ಸ್ವರಾಜ್ ಮತ್ತು 28ರಂದು ಅರುಣ್ ಜೇಟ್ಲಿ ಶಿವಮೊಗ್ಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಇವರೊಂದಿಗೆ ಇತರೆ ರಾಷ್ಟ್ರೀಯ ನಾಯಕರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement