ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಮ್ಮನ ಮಡಿಲು ಸೇರಿದ ಕಂದಮ್ಮಗಳು

ಅಮ್ಮ, ನಾನು ಅಳುವಂತೆ ನಟನೆ ಮಾಡಿದರೂ ಸಾಕಿತ್ತು, ಹಾಲುಣಿಸುತ್ತಿದ್ದೆ....

Rashmi Kasaragodu
Updated On : 24 Apr 2013, 12:50 pm

ಕ.ಪ್ರ.ವಾರ್ತೆ, ಶಿವಮೊಗ್ಗ,  ಏ.23-
ಅಮ್ಮ, ನಾನು ಅಳುವಂತೆ ನಟನೆ ಮಾಡಿದರೂ ಸಾಕಿತ್ತು, ಹಾಲುಣಿಸುತ್ತಿದ್ದೆ. ಆದರೆ ನಾನು ನಿಜವಾಗಿಯೂ ಹಸಿವಿನಿಂದ ಗೋಗರೆದರೂ, ಕಿರುಚಾಡಿದರೂ, ಸಂಕಟದಿಂದ ಹೊರಳಾಡಿದರೂ ನೀನು ನನ್ನ ಜತೆ ಇರಲಿಲ್ಲ. ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು ಅಂತಾರೆ. ಎರಡು ವಾರ ನಾನು ಅನುಭವಿಸಿದ ಪಡಿಪಾಟಲು ನಿನಗೆ ಗೊತ್ತಿದೆಯಾ ಒಂದೂವರೆ ವರ್ಷದ ನನ್ನನ್ನು ಹೀಗೆ ಬಿಟ್ಟು ಹೋಗುವುದಕ್ಕೆ ನಿನಗೆ ಮನಸಾದರೂ ಹೇಗೆ ಬಂತು ಅಮ್ಮ...
ಭದ್ರಾವತಿಯ ಬದನೆಹಾಳ್ ಗ್ರಾಮದ ಕಂದಮ್ಮಗಳ ಅರಣ್ಯರೋದನ ಹೀಗಿತ್ತು. ತಪ್ಪು ನಿನ್ನದಲ್ಲ ಅಮ್ಮ. ಅರಣ್ಯ ಇಲಾಖೆಯವರದ್ದು. ಒಂದಿಂಷ್ಟೂ ಕನಿಕರ ತೋರದೆ, ನಿನ್ನನ್ನು ಎಳೆದೊಯ್ದು ಸೆರೆಮನೆಯಲ್ಲಿಟ್ಟರಲ್ಲ. ನನ್ನ ಬಗ್ಗೆಯಾಗಲಿ, ನನ್ನಂತೆ ಈ ಊರಿನಲ್ಲಿರುವ ಇತರೆ ಕಂದಮ್ಮಗಳ ಕುರಿತಾಗಲಿ ಅಧಿಕಾರಿಗಳು ಕಿಂಚಿತ್ ಯೋಚನೆ ಮಾಡಿದ್ದರೂ, ಎರಡು ವಾರ ನಾನು ಹಸಿವಿನಿಂದ ಒದ್ದಾಡುವ ಪ್ರಮೇಯ ಇರುತ್ತಿರಲಿಲ್ಲ ಅಲ್ಲವೇ ಅಮ್ಮ.
ಪಕ್ಕದ ಮನೆಯ ಸುಶೀಲಮ್ಮ (ಹೆಸರು ಬದಲಾಯಿಸಲಾಗಿದೆ) ನನ್ನ ಅರೈಕೆ ಮಾಡಿರದಿದ್ದರೆ ಇಂದು ನಾನು ಶವವಾಗಿ ಬಿಡುತ್ತಿದೆ ಅಲ್ಲವೇ ಅಮ್ಮ. ಅದರಿಂದ ನಿನ್ನ ಕೊರತೆ ನೀಗಲಿಲ್ಲ ಅಮ್ಮ. ಆದರೂ ಅರಣ್ಯ ಇಲಾಖೆಯವರೇಕೆ ಇಷ್ಟು ಕಠೋರಿಗಳಾದರು ಹೇಳಮ್ಮ..
ಈ ಕಂದಮ್ಮಗಳು 17 ದಿನಗಳ ನಂತರ ಅಮ್ಮನನ್ನು ಕಂಡು ಹೀಗೆ ರೋಧಿಸುವಂತೆ ಕಾಣುತ್ತಿತ್ತು. ಏ.7ರಂದು ಅರಣ್ಯ ಇಲಾಖೆಯ ಒತ್ತುವರಿ ಕಾರ್ಯಾಚರಣೆ ವಿರೋಧಿಸಿ ರೈತರು ಹಾಗು ರೈತ ಮಹಿಳೆಯರು ಜೈಲ್ಭರೋ ಚಳವಳಿ ಮಾಡಿದರು. ಆದರೆ ರೈತರ ಆವೇಶ, ಆರ್ಥನಾದ ಅರ್ಥ ಮಾಡಿಕೊಳ್ಳದ ಅರಣ್ಯ ಇಲಾಖೆ, ಅನ್ನದಾತನನ್ನು 17 ದಿನ ಜೈಲಿನಲ್ಲಿ ಕೂಡಿಟ್ಟಿತ್ತು. ಇವರು ವಾಪಸು ಬಂದಾಗ ಬದನವಾಳ್ ಗ್ರಾಮದಲ್ಲಿ ಭಾವಪೂರಿತ ಸನ್ನಿವೇಶವಿತ್ತು.
ಅನಾಥ ಹಸುಗೂಸುಗಳು: ಅಪ್ಪ, ಅಮ್ಮ ಜೈಲು ಪಾಲಾಗಿದ್ದರಿಂದ ಅನ್ನದಾತನ ಮಕ್ಕಳೇ ತುತ್ತು ಅನ್ನಕ್ಕಾಗಿ ಕಂಡವರ ಮುಂದೆ ಕೈಯೊಡ್ಡಬೇಕಾಯಿತು. ಇಷ್ಟಾದರೂ ಅಧಿಕಾರಿಗಳಿಗೆ ಕರುಣೆ ಉಕ್ಕಲಿಲ್ಲ. ಜೈಲ್ ಭರೋ ಮಾಡಿ 61 ಮಂದಿಯನ್ನು ಕತ್ತಲ ಕೋಣೆಯಲ್ಲಿಯೇ ಉಳಿಸಿ, 87 ಜನರ ವಿರುದ್ಧ ಎಫ್ಐಆರ್ ದಾಖಲಿಸಿದರು. ಉಳಿದ ರೈತರ ಶೋಧಕಾರ್ಯವನ್ನೂ ಆರಂಭಿಸಿದರು. ಪೊಲೀಸರ ಭೀತಿಯಿಂದಾಗಿ ಒಂದಷ್ಟು ರೈತರು ಅರಣ್ಯವಾಸಿಗಳಾದರೆ, ಉಳಿದವರು ನೆಂಟರು, ಇಷ್ಟರ ಮನೆ ಸೇರಿದ್ದರು. ಇದರಿಂದಾಗಿ ಅನಾಥವಾಗಿದ್ದು ಮಾತ್ರ ಇಲ್ಲಿನ ಹಸುಗೂಸುಗಳು.
ಎಫ್ಐಆರ್ ದಾಖಲಾದ ಬಳಿಕ ರೈತರು ಹಾಗೂ ರೈತ ಮಹಿಳೆಯರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕಂಬಿಯ ಹಿಂದಿನ ಬದುಕಿನಿಂದ ವಾಪಾಸಾಗುತ್ತಿದ್ದಂತೆ, ತಾಯಂದಿರು ಏದುಸಿರು ಬಿಡುತ್ತಲೇ ಊರಿನತ್ತ ಹೆಜ್ಜೆ ಹಾಕಿದ್ದರು. ತಮ್ಮ ಅರೈಕೆಯಿಲ್ಲದಿದ್ದರೂ ಮಕ್ಕಳು ಬದುಕಿದ್ದನ್ನು ಕಂಡು ಚಕಿತರಾದರು. ಬಿಗಿದಪ್ಪಿ ಕಣ್ಣೀರು ಸುರಿಸಿದರು. ಮಗುವನ್ನು ಮುದ್ದಾಡಿದರು, ಹಾಲುಣಿಸಿದರು, ಅನ್ನ ಬೇಯಿಸಿ ಕೈ ತುತ್ತು ನೀಡಿದರು.
ರೈತರು ಜೈಲ್ ಭರೋ ಮಾಡಿದಾಗ, ಬದನೆಹಾಳ್ ಗ್ರಾಮದಲ್ಲಿಯೇ ಉಳಿದಿದ್ದ ರೈತ ಮಹಿಳೆಯರು ಮಕ್ಕಳ ಆರೈಕೆ ಮಾಡಿದ್ದರು. ಇಲ್ಲದಿದ್ದರೆ ಈ ವೇಳೆಗಾಗಲೇ ಬದನೆಹಾಳ್ನಲ್ಲಿ ಹಸಿವಿನಿಂದಾಗಿ ಮಕ್ಕಳ ಮಾರಣ ಹೋಮವೇ ನಡೆದಿರುತಿತ್ತು. ಇಷ್ಟಾದರೂ ಅರಣ್ಯ ಇಲಾಖೆಯವರು ಕಣ್ತಪಿಸಿಕೊಂಡಿರುವ ರೈತರ ಶೋಧ ಕಾರ್ಯ ಮಾತ್ರ ನಿಲ್ಲಿಸಿಲ್ಲ. ಪ್ರತಿ ನಿತ್ಯ ತಾಲೂಕಿನ ಎಲ್ಲೆಂದರಲ್ಲಿ ಕಂಡರೆ ಹಿಡಿಯಲು ಮುಂದಾಗುತ್ತಾರೆ.
ಈ ನಡುವೆ ತಮ್ಮ ಮಕ್ಕಳು, ಹೆಂಡತಿಯನ್ನು ಕಾಣಲು ಊರಿಗೆ ಬಂದರೆ ಎಲ್ಲಿ ಪೊಲೀಸರು ಹಿಡಿದು ಜೈಲು ಪಾಲು ಮಾಡುವರು ಎಂದು ರೈತರು ಭಯದಿಂದಲೇ ಕಾಲ ಕಳೆಯುತ್ತಿದ್ದಾರೆ. ಇತ್ತ 5-6 ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನುಗಳೇನೋ ಕಳೆದು ಕೊಂಡೆವು, ಉಳಿದಿರುವುದು ತಮ್ಮ ಹೆಂಡತಿ, ಮಕ್ಕಳು. ಅವರನ್ನು ಕಾಣಲು ಸಹ ಕದ್ದು ಮುಚ್ಚಿ ಬರುವಂತಾ ವಾತಾವರಣ ನಿರ್ಮಾಣವಾಗಿದೆ.
ನಮ್ಮ ದನಕರುಗಳನ್ನು ಸಹ ನೋಡಿಕೊಳ್ಳುವರು ಇಲ್ಲದಾಗಿದೆ ಎಂಬುದು ಪಲಾಯನ ಮಾಡಿದ ರೈತರ ನೋವಿನ ನುಡಿಗಳು. ಇನ್ನು ಜೈಲ್ಭರೋ ಮಾಡಿದ್ದ ರೈತರ ಪೈಕಿ ಎದೆನೋವಿನಿಂದ ಬಳಲುತ್ತಿದ್ದ ರೆಹಮಾನ್ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೈಲಿನಲ್ಲಿ ಬಾಲಾಪರಾಧಿ: 17 ವರ್ಷ ದಾಟದ ಅಪರಾಧಿಗಳನ್ನು ಬಾಲಾಪರಾಧಿ ಎಂದು ಪರಿಗಣಿಸಬೇಕು. ಆದರೆ ಬದನೆಹಾಳ್ ಗ್ರಾಮದಲ್ಲಿನ ಗಲಭೆ ಪ್ರಕರಣದಲ್ಲಿ, 17 ವರ್ಷದ (ಜನ್ಮದಿನಾಂಕ- 27-5-1995 ತಿಮ್ಮಪ್ಪನನ್ನು ಪೊಲೀಸರು ಬಂಧಿಸಿ ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು, ಜೈಲಿನಲ್ಲಿದ್ದ ಸಂದರ್ಭದಲ್ಲಿ ಹಾಜರಾತಿ ಕೊರತೆ ಉಂಟಾಗಿದೆ. ಇದರಿಂದ ಅಂತಿಮ ಪರೀಕ್ಷೆ ಬರೆಯಲು ಕಾಲೇಜು ಆಡಳಿತ ಮಂಡಳಿ ಅವಕಾಶ ನಿರಾಕರಿಸುವ ಸಾಧ್ಯತೆಯೂ ಇದೆ. ಅಲ್ಲದೇ ಭವಿಷ್ಯದಲ್ಲಿ ಸರ್ಕಾರಿ ಕೆಲಸ ಪಡೆಯುವ ವೇಳೆ ಇದ್ದರಿಂದ ಸಮಸ್ಯೆಯಾಗಬಹುದು.


ನಾನು ಜೈಲಿಗೆ ಹೋದಾಗಿನಿಂದ ಅಕ್ಕಪಕ್ಕದ ಮನೆಯವರು ನನ್ನ ಮಗುವನ್ನು ನೋಡಿಕೊಂಡಿದ್ದಾರೆ. ಅವರೆಲ್ಲಾ ಇಲ್ಲದಿದ್ದರೆ ಇವತ್ತು ಪರಿಸ್ಥಿತಿ ಏನಾಗಿರುತ್ತಿತ್ತೊ ಗೊತ್ತಿಲ್ಲ. ಜಮೀನು ಕಸಿದುಕೊಂಡಿದ್ದಾರೆ, ಮಗುವನ್ನೂ ಕಿತ್ತುಕೊಂಡುಬಿಡುತ್ತಿದ್ದರು.
- ಲಕ್ಷ್ಮೀ, ರೈತ ಮಹಿಳೆ
ನಾನು ಜೈಲಿಗೆ ಹೋದಾಗ ನನ್ನ ಒಂದೂವರೆ ವರ್ಷದ ಮಗು ಇಡೀ ದಿನ ಉಪವಾಸ ಇತ್ತು. ಅರಣ್ಯ ಇಲಾಖೆಯವರಿಗೆ ಇದ್ಯಾವುದೂ ಕಣ್ಣಿಗೆ ಕಾಣಿಸಿಲ್ಲ. ಈಗ ನಮ್ಮ ಹಸಿವು ನೀಗಿಸುವ ಜಮೀನನ್ನು ಕೂಡಾ ಕಿತ್ತುಕೊಂಡಿದ್ದಾರೆ.
- ಶಶಿಕಲಾ, ರೈತ ಮಹಿಳೆ


ಮತದಾನ ಬಹಿಷ್ಕಾರ?
ಈ ಎಲ್ಲಾ ಘಟನಾವಳಿಗಳ ನಡುವೆ ಕನ್ನಡಪ್ರಭ ಬದನೆಹಾಳ್ ಗ್ರಾಮಕ್ಕೆ ಭೇಟಿ ಗ್ರಾಮಸ್ಥರನ್ನು ಮಾತಿಗೆಳೆದಾಗ, ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಅರಣ್ಯ ಇಲಾಖೆಯಿಂದಾಗಲಿ ನಮಗೆ ಶಾಶ್ವತ ಪರಿಹಾರ ನೀಡದಿದ್ದರೆ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

- ಮೋಹನ್ ಕುಮಾರ್ ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement