ಆರೋಪ ಸಾಬೀತಾದರೆ ನಿವೃತ್ತಿ
ಗೌಡರಿಗೆ ನಾನು ಫೋನ್ ಮಾಡಿದ್ದರೆ ರಾಜಕೀಯ ನಿವೃತ್ತಿ: ಕಾಗೋಡು
ಕನ್ನಡಪ್ರಭ ವಾರ್ತೆ, ಸಾಗರ, ಏ.23
ಜೆಡಿಎಸ್ನಿಂದ ಗೋಪಾಲಕೃಷ್ಣ ಬೇಳೂರಿಗೆ ಟಿಕೆಟ್ ನೀಡಬೇಡಿ ಎಂದು ನಾನು ಎಚ್.ಡಿ. ದೇವೆಗೌಡರು ಹಾಗೂ ಪಿಜಿಆರ್ ಸಿಂಧ್ಯಾ ಅವರಿಗೆ ಫೋನ್ ಮಾಡಿದ್ದೇನೆ ಎನ್ನುವುದು ಆಧಾರ ರಹಿತ ಆರೋಪ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಫೋನ್ ಮಾಡಿ ಮಾತನಾಡಿದ್ದೇನೆ ಎನ್ನುವುದನ್ನು ಬೇಳೂರು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಟಿಕೆಟ್ಗಾಗಿ ಪರೇಡ್: ಕಾಂಗ್ರೆಸ್ನಿಂದ ಟಿಕೆಟ್ ಪಡೆಯಲು ದೆಹಲಿಯಲ್ಲಿ ಕಂಡ ಕಂಡ ನಾಯಕರ ಎದುರು ಪೆರೇಡ್ ನಡೆಸಿ ವಿಫಲವಾಗಿರುವ ಬೇಳೂರು, ಈಗ ನನ್ನ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ನಿಂದ ಟಿಕೆಟ್ ಪಡೆಯಲು ವಿಫಲರಾಗಿ, ಜೆಡಿಎಸ್ ಹೊಕ್ಕಿರುವ ಬೇಳೂರು, ಸ್ಪೀಕರ್ ತಮ್ಮ ರಾಜಿನಾಮೆ ಅಂಗೀಕಾರವಾಗುವ ಪೂರ್ವದಲ್ಲಿಯೇ ಬಿ ಫಾರಂ ಪಡೆದು ಸ್ಪರ್ಧಿಸಿದ್ದಾರೆ ಎಂದು ದೂರಿದರು.
ಗೋರಕ್ಸಿಂಗ್ ವರದಿ ಅನುಷ್ಠಾನದಲ್ಲಿ ರಾಜ್ಯದ ಪಾತ್ರವೂ ಇದೆ. ರಾಜ್ಯದ ಬಿಜೆಪಿ ಸರ್ಕಾರಕ್ಕೆ ಬೆಳೆಗಾರರ ಬಗ್ಗೆ ಕಾಳಜಿ ಇದ್ದಿದ್ದರೆ ತನ್ನ ಪಾಲಿನ ಅನುದಾನವನ್ನು ಘೋಷಣೆ ಮಾಡಬೇಕಿತ್ತು. ರಾಜ್ಯ ತನ್ನ ಪಾಲನ್ನು ಘೋಷಣೆ ಮಾಡಿದ್ದರೆ ಕೇಂದ್ರ ಸರ್ಕಾರವೂ ಘೋಷಣೆ ಮಾಡುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋರಕ್ಸಿಂಗ್ ವರದಿ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡಲಿದೆ ಎಂದರು.
ಆರೋಪ: ತುಮರಿ ಸೇತುವೆ ನಿರ್ಮಾಣಕ್ಕೆ ಈ ವರೆಗೆ ಹಣ ಬಿಡುಗಡೆಯಾಗಿಲ್ಲ. ಪತ್ರಗಳ ಮೇಲೆ ಮಾತ್ರ ಸೇತುವೆಗೆ ಹಣ ಬಿಡುಗಡೆಯಾಗಿರುವ ಪ್ರಸ್ತಾಪವಿದೆ. ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಬೇಜವಾಬ್ದಾರಿತನವೇ ಹಣ ಬಿಡುಗಡೆ ವಿಳಂಬವಾಗಲು ಕಾರಣ ಎಂದು ಆರೋಪಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯಾವುದೆ ಮೂಲದಿಂದಾದರೂ ಜನರಿಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸುವುದು, ಸೂರಿಲ್ಲದವರಿಗೆ ಸೂರು, ಪ್ರತಿಕಾರ್ಡ್ಗೆ 30 ಕೆಜಿ ಅಕ್ಕಿ, ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಯೋಜನೆ, ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಲಾಭದಾಯಕ ಬೆಲೆ ಕೊಡಿಸಲು ಬಜೆಟ್ನಲ್ಲಿ ಹಣ ಮೀಸಲಿಡುವ ಜೊತೆಗೆ ರಾಜ್ಯಮಟ್ಟದಲ್ಲಿ ಶಾಸನಬದ್ಧ ಆಯೋಗ ರಚನೆ, ಹನಿನೀರಾವರಿಗೆ ಸಬ್ಸಿಡಿದರದಲ್ಲಿ ಸಾಲ ಸೌಲಭ್ಯ ಹೀಗೆ ಹಲವು ಯೋಜನೆಗಳನ್ನು ಅಳವಡಿಸಲಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಪ್ರಮುಖರಾದ ಕೆ. ಹೊಳೆಯಪ್ಪ, ಮಕ್ಬೂಲ್ ಅಹಮದ್, ಲಲಿತಮ್ಮ, ನಂದಾ ಗೊಜನೂರು, ಭೀಮನೇರಿ ಶಿವಪ್ಪ, ಐ.ಎನ್. ಸುರೇಶಬಾಬು, ತೀ.ನ. ಶ್ರೀನಿವಾಸ್, ಮಂಜೂರಾಲಿಖಾನ್, ಸುಂದರಸಿಂಗ್, ಹಾಜರಿದ್ದರು.