ಇಂದು ಡಾ.ರಾಜ್ ಸಂಗೀತೋತ್ಸವ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.23
ಬುಧವಾರ ರಾಜ್ ಕುಮಾರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ರಾಜ್ ಕುಮಾರ್ ಅವರನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯಕ್ರಮ ನಗರದಲ್ಲಿ ಆಯೋಜನೆಗೊಂಡಿದೆ. ಶಿವಮೊಗ್ಗದ ಋತ್ವಿಕ್ ಮುರಳೀಧರ್ ನೇತೃತ್ವದ ಯುವ ಗಾಯಕರ ತಂಡ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದು ಏ.24ರ ಸಂಜೆ 6 ಗಂಟೆಯಿಂದ ಡಾ.ರಾಜ್ ಸಂಗೀತೋತ್ಸವ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿರುವ ಗಾಯಕ ಋತ್ವಿಕ್ ಮುರಳೀಧರ್, ಬುಧವಾರ ರಾಜ್ ಕುಮಾರ್ ಅವರ 83ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ರಾಜ್ಕುಮಾರ್ ಅವರೇ ಹಾಡಿರುವ ಅಪರೂಪದ ಹಾಡುಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸುವ ಮತ್ತು ಅವರ ಸಾಧನೆಯನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ನಮ್ಮ ತಂಡದಲ್ಲಿ ತಾನು ಸೇರಿದಂತೆ ಚೇತನ್ ಕುಮಾರ್, ಕೀರ್ತನಾ ಎಸ್. ಕುಮಾರ್, ಇಂಪನಾ, ಅಮಿತ್ ಹಾಡುಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಾವೆಲ್ಲವೂ ಮೂಲತಹ ಶಿವಮೊಗ್ಗದವರಾಗಿದ್ದು, ಶಾಸ್ತ್ರೀಯ ಸಂಗೀತ ಹಿನ್ನೆಲೆಯಿಂದ ಬಂದವರು.
ಈ ಹಿಂದೆ ಶಿವಮೊಗ್ಗದಲ್ಲಿ ಸಂಡೆ ಸಂಗೀತ ಸಂಜೆ ಕಾರ್ಯಕ್ರಮ ಪ್ರಸ್ತುತಪಡಿಸಿದ್ದೆವು. ಆ ಕಾರ್ಯಕ್ರಮಕ್ಕೆ ಜನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಇದರಿಂದ ಉತ್ತೇಜಿತರಾಗಿ ಈ ಸಂಗೀತೋತ್ಸವ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
8 ಕಲಾವಿದರು ವಾದ್ಯ ಸಹಕಾರ: ಕಾರ್ಯಕ್ರಮದ ವಿಶೇಷತೆ ಎಂದರೆ 8 ಕಲಾವಿದರು ವಾದ್ಯ ಸಹಕಾರ ನೀಡುತ್ತಿದ್ದು, ಇವರೆಲ್ಲರೂ ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ. ಮೂರು ಗಂಟೆ ಕಾರ್ಯಕ್ರಮ ಇದಾಗಿರುತ್ತದೆ ಎಂದ ಅವರು, ಡಾ. ರಾಜ್ಗೆ ಹಾಡಿನ ಮೂಲಕ ಸಲ್ಲಿಸುವ ವಿಶೇಷ ಗೌರವ ಇದಾಗಿರುತ್ತದೆ ಎಂದು ವಿವರಿಸಿದರು. ಡಾ.ರಾಜ್ಕುಮಾರ್ ಅವರ ನಟನೆ ಎಷ್ಟು ಚೆನ್ನಾಗಿ ಮಾಡುತ್ತಿದ್ದರೋ ಅಷ್ಟೇ ಒಳ್ಳೆ ಚೆನ್ನಾಗಿ ಹಾಡುತ್ತಿದ್ದರು. ವಿದ್ವಾಂಸರೂ ಸಹ ಇದನ್ನು ಒಪ್ಪಿಕೊಳ್ಳುತ್ತಾರೆ. ನಾದಮಯ ಹಾಡು ಇದಕ್ಕೊಂದು ತಾಜಾ ಉದಾಹರಣೆ. ಹೀಗಿರುವಾಗ ಒಬ್ಬ ಗಾಯಕನಿಗೆ ಈ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂಗೀತೋತ್ಸವದಲ್ಲಿ ನಾವು ಯಾವ ಹಾಡು ಹಾಡುತ್ತಿದ್ದೇವೆಂದು ಸಾರ್ವಜನಿಕರು ಊಹಿಸಿ ಎಸ್ಎಂಎಸ್ ಮಾಡಿದರೆ ಅವರಿಗೆ ಬಹುಮಾನವನ್ನೂ ನೀಡಲಾಗುತ್ತಿದೆ. ಹಾಡು ಗೆಸ್ ಮಾಡಿ 9945499990ಗೆ ಎಸ್ಎಂಎಸ್ ಮಾಡಬೇಕು, ಈ ಕಲಾವಿದರು ಆಯ್ಕೆ ಮಾಡಿಕೊಂಡ ಹಾಡು ಅದೇ ಆಗಿದ್ದರೆ ಎಸ್ಎಂಎಸ್ ಕಳುಹಿಸಿದವರಿಗೆ ಬಹುಮಾನ ನೀಡಲಾಗುತ್ತಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದ ಪಾಸ್ಗಳು ನಗರದ ಶಂಕರ್ ಸೈಕಲೋತ್ಸವ, ಟೈರ್ಕೇರ್ನಲ್ಲಿ ಲಭ್ಯವಿರುತ್ತದೆ.