ಕಾಂಗ್ರೆಸ್ನಲ್ಲಿ ವ್ಯಾಪಕ ಭ್ರಷ್ಟಾಚಾರ: ಪ್ರಹ್ಲಾದ್ ಜೋಶಿ
ಭದ್ರಾವತಿ: ಕಾಂಗ್ರೆಸ್ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದರೂ ಪಕ್ಷದ ವರಿಷ್ಠರು ಯಾವುದೇ ಕ್ರಮ ಕೈಗೊಳ್ಳದಂತಹ ಸ್ಥಿತಿ ಉಂಟಾಗಿರುವುದು ದೇಶದ ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ದೂರಿದರು.
ಬಸವೇಶ್ವರ ವೃತ್ತದಲ್ಲಿ ಪಕ್ಷದ ನಗರ ಘಟಕ ಏರ್ಪಡಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಕಾಂಗ್ರೆಸ್ ಈಗ ದಿಕ್ಕುದೆಸೆ ಇಲ್ಲದ ಪರಿಸ್ಥಿತಿಯಲ್ಲಿದೆ. ಸಿಎಂ ಸ್ಥಾನಕ್ಕಾಗಿ ಪಕ್ಷದ ನಾಯಕರಲ್ಲಿ ಪರಸ್ಪರ ಕಿತ್ತಾಟ ನಡೆಯುತ್ತಿದೆ ಎಂದರು.
ಭದ್ರಾವತಿಯಲ್ಲಿ ಯೋಗ್ಯತೆ ಇಲ್ಲದವರಿಗೆ ಮಣೆ ಹಾಕಿದರೆ ಪುನ- ಗುಡ್ಡದ ನೇರಳೆಕೆರೆ ಪದ್ದಕ್ಕನ ಪ್ರಕರಣ, ರೋಲೆಕ್ಸ್ ವಾಚ್ ಹಗರಣಗಳು ಮರುಕಳಿಸುತ್ತವೆ. ಸ್ವಾಭಿಮಾನಿಗಳಾದ ಭದ್ರಾವತಿಯ ಜನರನ್ನು ಗುತ್ತಿಗೆಗೆ ನೀಡಿದ್ದೆ ಎಂದು ಹೇಳುವ ಮೂಲಕ ಕೆಣಕುವುದು ರಾಜಕೀಯ ನಾಯಕರಿಗೆ ಥರವಲ್ಲ ಎಂದು ಹೇಳಿದರು.
ಈ ಅಭ್ಯರ್ಥಿ ಹಿಂದೆ ಜನತಾ ದಳದಲ್ಲಿದ್ದಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಗ್ಗೆ ಯಾವ ರೀತಿ ಮಾತನಾಡಿದ್ದರೆಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ಛೇಡಿಸಿದ ಅವರು, ಈಗ ಅವರ ಪಕ್ಷದಲ್ಲೇ ಇದ್ದು ಮತಯಾಚನೆ ಮಾಡುತ್ತಿದ್ದಾರೆ. ಇಂತಹ ಬ್ರಹ್ಮರಾಕ್ಷಸನಿಗೆ ಬೆಂಬಲ ನೀಡಿದರೆ ಭದ್ರಾವತಿಗೆ ತೊಂದರೆ ಕಟ್ಟಿಟ್ಟಬುತ್ತಿ ಎಂದು ಒತ್ತಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಕ್ಷೇತ್ರದಲ್ಲಿ ಮೂರು ದಶಕಗಳ ಹಿಂದೆ ನಡೆದ ಘಟನೆಗಳನ್ನು ಚುನಾವಣೆಯ ಸಮಯದಲ್ಲಿ ಜನತೆ ಮರೆತಿರುವುದು ವಿಷಾದನೀಯವೆಂದರು.
ಪಕ್ಷದ ಅಭ್ಯರ್ಥಿ ಎಸ್.ಬಿ. ಶಿವಾಜಿರಾವ್ ಸಿಂಧ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೇಕೆಂಬ ಇಚ್ಛೆಯಿಂದ ತಾವು ಸ್ಪರ್ಧಿಸಿದ್ದು, ಜನತೆ ತಮ್ಮನ್ನು ಬೆಂಬಲಿಸಬೇಕೆಂದು ವಿನಂತಿಸಿದರು.
ಬಿ.ಎಚ್. ರುದ್ರಪ್ಪ, ರಾಘವೇಂದ್ರಚಾರ್, ಬಿ.ಜಿ. ರಾಮಲಿಂಗಯ್ಯ, ಬಿ.ಕೆ.ಶ್ರೀನಾಥ್, ಆರ್.ಎಸ್. ಶೋಭ, ಸುನಂದ, ಗಿರೀಶ್ ಪಾಟೀಲ್, ಮಂಜುನಾಥ್, ಎಂ.ಎಸ್. ಸುರೇಶಪ್ಪ ಇದ್ದರು.
ಡಿಸಿಎಂ ಈಶ್ವರಪ್ಪ ವಿರುದ್ಧ ದೂರು
ಶಿವಮೊಗ್ಗ: ಆರತಿ ಮಾಡಿದ ಮಹಿಳೆಯರಿಗೆ ಹಣ ನೀಡಿದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸೋಮವಾರ ಬೆಳಿಗ್ಗೆ ಪ್ರಚಾರ ನಡೆಸುತ್ತಿದ್ದ ವೇಳೆ ಆರತಿ ಮಾಡಿದ ಮಹಿಳೆಯರಿಗೆ ಈಶ್ವರಪ್ಪ ಅವರು 500, 1000 ನೋಟುಗಳನ್ನು ನೀಡಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಚುನಾವಣಾ ಮಾದರಿ ನೀತಿ ಸಂಹಿತೆ ಅಧಿಕಾರಿ ವಿಶ್ವನಾಥ್ ಅವರು ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್ ಅವರ ಸೂಚನೆ ಮೇರೆಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಪ್ರಜಾಪ್ರತಿನಿಧಿ ಕಾಯ್ದೆ ಕಲಂ 123ಎ ಹಾಗೂ ಐಪಿಸಿ ಕಲಂ 171 ಎಚ್ ಅನ್ವಯ ದೂರು ದಾಖಲಿಸಲಾಗಿದೆ.