ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಿದ್ದಲಿಂಗ ಶ್ರೀಗಳ 3 ವರ್ಷಗಳ ಮೌನವ್ರತ ಅಂತ್ಯ

Rashmi Kasaragodu
Updated On : 24 Apr 2013, 11:19 am

ಕ.ಪ್ರ.ವಾರ್ತೆ, ಭದ್ರಾವತಿ, ಏ.23
ಭದ್ರಾವತಿ ತಾಲೂಕು ಗೋಣಿಬೀಡು ಶೀಲಸಂಪಾದನಾ ಮಠದ 19ನೇ ಪೀಠಾಧಿಪತಿ ಮಹಾನಿರಂಜನ ಪ್ರಭು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಮೂರು ವರ್ಷಗಳ ಮೌನ ವ್ರತ ಅನುಷ್ಠಾನವನ್ನು ಸೋಮವಾರ ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಗುರುದರ್ಶನ ಸಮಾರಂಭವನ್ನು ರಂಭಾಪುರಿ ಶಾಖಾ ಯಡಿಯೂರು ಕ್ಷೇತ್ರದ ಶ್ರೀ ವಿಮಲ ರೇಣುಕ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಸಿದ್ದಲಿಂಗ ಮಹಾಸ್ವಾಮಿಗಳು ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆಯನ್ನು ಮಾಡಿ ಸಮಾಜಕ್ಕೆ ಒಳಿತನ್ನು ಮಾಡಿದ್ದಾರೆಂದು ಶ್ಲಾಘಿಸಿದರು.
ಹಿರಿಮೆ- ಗರಿಮೆ ಜೀವಂತ: ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಹಾರನಹಳ್ಳಿ ಕೋಡಿಮಠದ ಶ್ರಿಮನ್ನಿರಂಜನ ಜಗದ್ಗುರು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಋಷಿಮುನಿಗಳಿಂದ ಹಾಗೂ ಯೋಗಿಗಳಿಂದ ಭಾರತೀಯರ ಧಾರ್ಮಿಕ ಪರಂಪರೆಯ ಹಿರಿಮೆ ಗರಿಮೆಗಳು ಜೀವಂತವಾಗಿವೆ ಎಂದು ತಿಳಿಸಿದರು.
ತಪಸ್ಸಿನಿಂದ ಸಂಪಾದಿಸಿದ ಸಿದ್ಧಿಯನ್ನು, ಪ್ರಕೃತಿಯ ಚಿಂತನೆಗಳನ್ನು ಹಾಗೂ ಮೌನದ ಮೂಲಕ ಸಂಪಾದಿಸಿದ ಶಕ್ತಿಯನ್ನು ಸಾಧಕರು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸುತ್ತಿದ್ದರು. ಮೌನವೂ ಸಂವಹನ ಕ್ರಿಯೆಯ ಮಾಧ್ಯಮ. ಸಿದ್ಧಿ ಮತ್ತು ಪ್ರಸಿದ್ಧಿ ಪ್ರತ್ಯೇಕವಾದರೂ ಲಿಂಗಾನುಸಂಧಾನದಿಂದ ಎರಡೂ ಒಂದೇ ಆಗಿದೆ. ಪ್ರಕೃತಿಯ ಪಥವನ್ನು ಬದಲಾಯಿಸುವ ಶಕ್ತಿಯನ್ನು ಋಷಿಮುನಿಗಳು ಪಡೆದಿದ್ದರು. ಮೌನಾನುಷ್ಠಾನದಿಂದ ಗೋಣಿಬೀಡು ಶೀಲಸಂಪಾದನಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಮತ್ತೊಂದು ಸಾಧನೆಯನ್ನು ಮಾಡಿದ್ದಾರೆಂದು ಹೇಳಿದರು.
ಅನ್ನಾಹಾರಗಳನ್ನು ತ್ಯಜಿಸಿ ಮೌನ ವ್ರತ ಅನುಷ್ಠಾನವನ್ನು ಮೂರು ವರ್ಷಗಳ ಕಾಲ ಪಾಲಿಸಿ ಮಹತ್ಸಾಧನೆಯನ್ನು ಸಿದ್ದಲಿಂಗ ಮಹಾಸ್ವಾಮಿಗಳು ಮಾಡಿದ್ದಾರೆಂದು ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು. ದೈಹಿಕವಾಗಿ ಕೃಷರಾಗಿದ್ದರೂ ಜ್ಞಾನದ ದೃಷ್ಟಿಯಿಂದ ಅಪಾರ ತೇಜಸ್ಸನ್ನು ಸ್ವಾಮಿಗಳು ಹೊಂದಿದ್ದಾರೆಂದು ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮಿಗಳು ತಿಳಿಸಿದರು.
ಮೌನವ್ರತ ಅನುಷ್ಠಾನದ ಮೂಲಕ ಸಿದ್ದಲಿಂಗ ಮಹಾಸ್ವಾಮಿಗಳು ಸಮಾಜಕ್ಕೆ ಸಂದೇಶ ನೀಡಿದ್ದಾರೆಂದು ರಂಭಾಪುರಿ ಬಿಳಕಿ ಹಿರೇಮಠದ ರಾಚೋಟೇಶ್ವರ ಮಹಾಸ್ವಾಮಿಗಳು ತಿಳಿಸಿದರು.
ಚನ್ನಗಿರಿ ವಿರಕ್ತ ಮಠದ ಶ್ರೀ ಜಯದೇವ ಸ್ವಾಮಿಗಳು ಅನುಷ್ಠಾನ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಶಿಕಾರಿಪುರ ತಾಲೂಕು ಕಾಳೇನಹಳ್ಳಿ ಶಿವಯೋಗಾಶ್ರವುದ ಶ್ರೀ ರೇವಣಸಿದ್ದ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಗೊಂದಿ ಪಾಂಡುರಂಗ ಸಾಧಕಾಶ್ರಮದ ಶ್ರೀ ನಾಮದೇವಾನಂದ ಭಾರತಿ ಸ್ವಾಮಿಗಳು, ಮೇಟಕರ್ಕೆ ವಿರಕ್ತಮಠದ ಶ್ರೀ ರಾಜಶೇಖರ ಸ್ವಾಮಿಗಳು, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮಿಗಳು,  ಪಂಡಿತ ರೇಣುಕಾಚಾರ್ಯ, ಅನೇಕ ಮಠಾಧೀಶರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement