v
ಶಿವಮೊಗ್ಗ: ಕೋಮು ಪ್ರಚೋದಕ ಭಾಷಣ ಮಾಡಿದ ಆರೋಪದ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಬಂಧನ ಭೀತಿ ಎದುರಿಸುತ್ತಿದ್ದ ಉಪಮುಖ್ಯಮಂತ್ರಿ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಷರತ್ತು ಬದ್ದ ನಿರೀಕ್ಷಣಾ ಜಾಮೀನು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಎಂ.ಶೆಟ್ಟರ್, 25 ಸಾವಿರ ರುಪಾಯಿಗಳ ಬಾಂಡ್ ಜೊತೆಗೆ ಸಾಲ್ವೆಂಟ್ ಶ್ಯೂರಿಟಿ ನೀಡಬೇಕು. ದೂರುದಾರರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಕೆಹಾಕುವುದಾಗಲಿ ಅಥವಾ ಆಶ್ವಾಸನೆ ನೀಡುವುದಾಗಲಿ ಮಾಡಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅಗತ್ಯವೆನಿಸಿದ ವೇಳೆ ತನಿಖಾಧಿಕಾರಿ ಮುಂದೆ ಖುದ್ದು ಹಾಜರಾಗುವಂತೆ ಷರತ್ತು ವಿಧಿಸಿ ಜಾಮೀನು ನೀಡಿದರು.
ತಪ್ಪಿದ ಬಂಧನ ಭೀತಿ: ಈ ಬೆಳವಣಿಗೆಯಿಂದಾಗಿ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಬಂಧನ ಭೀತಿಯಿಂದ ಮುಕ್ತರಾದಂತಾಗಿದೆ. ಈಶ್ವರಪ್ಪ ಪರವಾಗಿ ಅಶೋಕ್. ಭಟ್ ಹಾಗೂ ಸರ್ಕಾರದ ಪರವಾಗಿ ಎಂ.ಆರ್.ರಾಥೋಡ್ ವಾದ ಮಂಡಿಸಿದ್ದರು.
ಡಿಸಿಎಂ ಕೆ.ಎಸ್. ಈಶ್ವರಪ್ಪರವರು ಏ. 9ರಂದು ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ವೇದಿಕೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು.
ಲವ್ ಜಿಹಾದ್: ತಮ್ಮ ಭಾಷಣದಲ್ಲಿ ಶಿವಮೊಗ್ಗಮೊಂದರಲ್ಲಿಯೇ 68 ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಮುಸ್ಲಿಂ ಯುವಕರು ಲವ್ ಜಿಹಾದ್ ಹೆಸರಿನಲ್ಲಿ ಹೊತ್ತೊಯ್ದಿದ್ದಾರೆ ಎಂಬುವುದು ಸೇರಿದಂತೆ ಹಲವು ವಿಷಯಗಳ ಕುರಿತಂತೆ ಮಾತನಾಡಿದ್ದರು.
ಈ ಕುರಿತಂತೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರ-113ರ ಫ್ಲೈಯಿಂಗ್ ಸ್ಕ್ವಾಡ್- 4ರ ಮುಖ್ಯಸ್ಥರು ಕೋಟೆ ಠಾಣೆಯಲ್ಲಿ ಈಶ್ವರಪ್ಪ ವಿರುದ್ದ ಕ್ರಿಮಿನಲ್ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕೋಟೆ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 153 (ಎ), 295 (ಎ), 298 ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ ಕಲಂ 125ರಡಿ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ತಮ್ಮ ವಿರುದ್ದ ದಾಖಲಾಗಿದ್ದ ಕ್ರಿಮಿನಲ್ ಕೇಸ್ನ ಹಿನ್ನೆಲೆಯಲ್ಲಿ ಏ.15ರಂದು ಈಶ್ವರಪ್ಪನವರು ತಮ್ಮ ವಕೀಲರ ಮೂಲಕ ಸಿಆರ್ಪಿಸಿ ಕಲಂ 438ರ ಅಡಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಪ್ರವೀಣ್ಕುಮಾರ್ ಮೂಲಕ ಸಿಆರ್ಪಿಸಿ ಕಲಂ 301(2)ರ ಅಡಿ ಅರ್ಜಿ ಸಲ್ಲಿಸಿ, ಈಶ್ವರಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಿಗೆ ಸಹಾಯಕರಾಗಿ ಸಲಹೆ ನೀಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಏ.19 ಹಾಗೂ 20ರಂದು ಸತತ 2ದಿನಗಳ ಕಾಲ ವಾದಿ-ಪ್ರತಿವಾದಿಗಳ ವಾದ ಆಲಿಸಿದ ನ್ಯಾಯಾಧೀಶರು ಏ.24ಕ್ಕೆ ವಿಚಾರಣೆ ಮುಂದೂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.