ಅಗ್ನಿ ಸುರಕ್ಷತಾ ಸಪ್ತಾಹ ಆಚರಣೆ
ಕ.ಪ್ರ.ವಾರ್ತೆ, ಭದ್ರಾವತಿ, ಏ.24
ಪಟ್ಟಣದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಏ.15ರಿಂದ 20ರ ವರೆಗೆ ಅಗ್ನಿ ಸುರಕ್ಷತಾ ಸಪ್ತಾಹ ಆಚರಿಸಲಾಯಿತು. ಉದ್ಯೋಗಿಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಕಾರ್ಯಕ್ಷೇತ್ರಗಳಲ್ಲಿ ಅವರ ಅಗ್ನಿ ಸುರಕ್ಷತಾ ಬದ್ಧತೆ ಬಲಪಡಿಸುವುದು ಇದರ ಉದ್ದೇಶವಾಗಿತ್ತು ಎಂದು ವಿಐಎಸ್ಎಲ್ ಪ್ರಕಟಣೆ ತಿಳಿಸಿದೆ.
ಅಗ್ನಿಸುರಕ್ಷತಾ ಇಲಾಖೆ ಇತರ ಇಳಾಖೆಗಳೊಡಗೂಡಿ ಅಗ್ನಿಸುರಕ್ಷತಾ ಪ್ರಥಮ ಚಿಕಿತ್ಸೆ ತರಬೇತಿ ನಡೆಸಿತು. ಉತ್ಪಾದನಾ ಇಲಾಖೆಗಳಾದ ಊದುಕುಲುಮೆ, ಉಕ್ಕು ತಯಾರಿಕಾ ಘಟಕ (ಎಸ್.ಎಂ.ಎಸ್), ಫೋರ್ಜ್ ಮತ್ತು ಹೀಟ್ ಟ್ರೀಟ್ಮೆಂಟ್ ಶಾಪ್ನ ಉದ್ಯೋಗಿಗಳಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ತರಬೇತಿ ನೀಡಲಾಯಿತು.
400 ಜನರಿಗೆ ತರಬೇತಿ: ವಿದ್ಯುತ್ಛಕ್ತಿ ನಿರ್ವಹಣಾ ವಿಭಾಗದಲ್ಲಿ ಕ್ರೇನ್ಸ್ ಇಲಾಖೆ, ಮೆಕ್ಯಾನಿಕಲ್ ನಿರ್ವಹಣೆ ವಿಭಾಗ, ಸ್ಟ್ರಕ್ಚರಲ್ ಶಾಪ್ ಮತ್ತು ಸರ್ವೀಸ್ ವಿಭಾಗದಲ್ಲಿ, ಜನರಲ್ ಫೌಂಡ್ರಿ ಉದ್ಯೋಗಿಗಳಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ತರಬೇತಿಯನ್ನು ನೀಡಲಾಯಿತು. ಒಟ್ಟು 400 ಉದ್ಯೋಗಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.