ಆರೋಗ್ಯ ಕುರಿತು ಕಾಳಜಿ ವಹಿಸಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.24
ವೈದ್ಯರು ಚಿಕಿತ್ಸೆ ನೀಡಬಹುದು ಅಷ್ಟೇ. ಆದರೆ, ಆರೋಗ್ಯದ ಕಾಳಜಿ, ಜೀವನ ಶೈಲಿಯ ಬದಲಾವಣೆಯನ್ನು ರೋಗಿ ನಿರ್ವಹಿಸಬೇಕಾಗುತ್ತದೆ ಎಂದು ಮನೋರೋಗ ತಜ್ಞ ಡಾ. ಅಶೋಕ್ಪೈ ಹೇಳಿದರು.
ವಾತ್ಸಲ್ಯ ಆಸ್ಪತ್ರೆ ಬುಧವಾರ ಆಯೋಜಿಸಿದ್ದ ಮಧುಮೇಹ ವಿಶೇಷ ಚಿಕಿತ್ಸಾಲಯ ಹಾಗೂ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ರೋಗ ಬರುವುದು ಸಾಮಾನ್ಯ. ಆದರೆ, ಅದನ್ನು ತಡೆಗಟ್ಟುವುದು ಹಾಗೂ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಅವಶ್ಯಕ ಎಂದ ಅವರು, ಇಂದು ಹಲವಾರು ಕಾಯಿಲೆಗಳು ಹರಡುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸುವುದು ಸೂಕ್ತ ಎಂದರು.
ಶಂಕರ ಕಣ್ಣಿನ ಆಸ್ಪತ್ರೆ ವೈದ್ಯ ಡಾ. ರವಿಶಂಕರ್ ಮಾತನಾಡಿ, ಮಧುಮೇಹ ಬಂದಾಗ ಕೇವಲ ಒಂದು ಅಂಗಕ್ಕೆ ಹಾನಿ ಆಗುವುದಿಲ್ಲ. ಕಣ್ಣು, ಮೂತ್ರಪಿಂಡ, ಹೃದಯ ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹಾನಿ ಮಾಡುತ್ತದೆ. ಆದ್ದರಿಂದ ಮಧುಮೇಹ ಕಂಡು ಬಂದರೆ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಫಿಜಿಷಿಯನ್ ಡಾ.ಪೃಥ್ವಿ, ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ, ಡಾ. ಗೀತಾ ರವಿ, ಡಾ. ರವಿ, ಡಾ. ಯತೀಶ, ಡಾ. ಶಂಕರ, ಡಾ. ಮಹೇಶ್ಮೂರ್ತಿ, ಬಸವೇಶ್ ಗದ್ದಿಕೇರಿ, ಡಾ. ಪ್ರವೀಣ್, ಸಾರ್ವಜನಿಕ ಸಂಪರ್ಕಾಧಿಕಾರಿ ಧೀರೇಂದ್ರ ಪಂಢರಿ, ನಾಗಭೂಷಣ್, ಹರೀಶ್, ಇದ್ದರು.