ಎರಡು ರುಪಾಯಿ ಚಾಲೆಂಜ್...!
ಶಿವಮೊಗ್ಗ: ಅನುಮಾನಸ್ಪದ ಮತದಾರನ ಬಗ್ಗೆ ರಾಜಕೀಯ ಪಕ್ಷಗಳು ಎರಡು ರುಪಾಯಿ ಠೇವಣಿ ಇಟ್ಟು ಪರಿಶೀಲನೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯೊಂದಿದೆ.
ಮತದಾನದ ವೇಳೆ ಅಭ್ಯರ್ಥಿಗಳ ಕಡೆಯ ಏಜೆಂಟರು ಮತದಾನ ಮಾಡಲು ಬಂದ ಮತದಾರನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಇವರು ಮೂಲ ಮತದಾರರಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭ ಎದುರಾದರೆ ಅಂತಹ ಮತದಾರರ ವಿವರದ ಕುರಿತು ಸಿಬ್ಬಂದಿ ಸಮಗ್ರ ಪರಿಶೀಲನೆ ನಡೆಸಬೇಕು. ಅಷ್ಟೇ ಅಲ್ಲದೇ, ಆಕ್ಷೇಪ ವ್ಯಕ್ತಪಡಿಸಿದ ಏಜೆಂಟರಿಂದ 2 ರುಪಾಯಿ ಶುಲ್ಕ ಪಡೆದು ಪ್ರತ್ಯೇಕ ಅರ್ಜಿಯಲ್ಲಿ ಆಕ್ಷೇಪದ ಮಾಹಿತಿ ಭರ್ತಿ ಮಾಡಬೇಕು. ನಂತರ ಆ ಅನುಮಾನಾಸ್ಪದ ಮತದಾರನ ವಿವರ ಪರಿಶೀಲನೆ ನಡೆಸಬೇಕು.
ಪರಿಶೀಲನೆಯಲ್ಲಿ ಆಕ್ಷೇಪ ಸಾಬೀತಾಗದಿದ್ದಲ್ಲಿ ಏಜೆಂಟ್ ನೀಡಿದ 2 ರುಪಾಯಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ಒಂದು ವೇಳೆ ಆಕ್ಷೇಪ ಸಾಬೀತಾದಲ್ಲಿ ಸಂಬಂಧಿಸಿದ ಏಜೆಂಟ್ಗೆ 2 ರುಪಾಯಿ ವಾಪಾಸ್ ನೀಡಿ, ಮತದಾರನನ್ನು ಪೊಲೀಸ್ ವಶಕ್ಕೆ ಒಪ್ಪಿಸಬೇಕು.
ಈ ಮಾಹಿತಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿಗೆ ನಿರ್ದೇಶಿಸಲಾಯಿತು.