ಗೇರು ಬೆಳೆ ಕುರಿತು ರೈತರಲ್ಲಿ ಆಸಕ್ತಿ ಹೆಚ್ಚಳ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.24
ಗೇರು ಬೆಳೆಯು ಕೇವಲ ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಗೇರು ನಿರ್ಲಕ್ಷಿತ ಬೆಳೆಯಾಗಿತ್ತು.
ಈಗ ಇದರ ಕೃಷಿಯಲ್ಲಿ ರೈತರು ಹೆಚ್ಚಿನ ಅಸಕ್ತಿ ಹೊಂದುತ್ತಿದ್ದು ಇದು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಪಿ.ಎಮ್. ಸಾಲಿಮಠ್ ಹೇಳಿದರು.
ನವಿಲೆಯ ಕೃಷಿ ಮಹಾವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೊಚ್ಚಿನ್‌ನ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಪ್ರಯೋಜಕತ್ವದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ- ಗೇರು ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆ- ಕುರಿತ 3 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ವಾಣಿಜ್ಯ ಬೆಳೆ: ಗೇರು ನಮ್ಮ ದೇಶಕ್ಕೆ ವಿದೇಶಿ ವಿನಿಮಯಗಳಿಸಿಕೊಡುತ್ತಿರುವ ಮುಖ್ಯ ವಾಣಿಜ್ಯ ಬೆಳೆ. 2011-12ನೇ ಸಾಲಿನಲ್ಲಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ವಿದೇಶಿ ವಿನಿಮಯವನ್ನು ಗಳಿಸಿಕೊಟ್ಟಿದೆ.
ಪ್ರತಿ ವರ್ಷ ಸುಮಾರು 5- 6 ಲಕ್ಷ ಟನ್ ಕಚ್ಚಾ ಗೇರು ಬೀಜವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅದ್ದರಿಂದ ರೈತರು ಗೇರುಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆದು ಅರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಶೋಧನಾ ನಿರ್ದೇಶಕ ಡಾ. ಬಿ. ಸತ್ಯನಾರಾಯಣರೆಡ್ಡಿ, ಜಿಲ್ಲೆಯಲ್ಲಿ ಗೇರು ಮತ್ತು ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿಪುಲ ಅವಕಾಶವಿದ್ದು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ದೊರೆಯುವ ಅರ್ಥಿಕ ಸೌಲಭ್ಯವನ್ನು ಉಪಯೋಗಿಸಿಕೊಂಡು ವಿಶ್ವವಿದ್ಯಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ಹೆಚ್ಚಿನ ಇಳುವರಿ ಪಡೆದು ಅರ್ಥಿಕ ಪ್ರಗತಿ ಸಾಧಿಸಲು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಜಿ.ಆರ್. ರಾಮಸ್ವಾಮಿ, ಸಹ ಸಂಶೋಧನಾ ನಿರ್ದೇಶಕ ಡಾ. ವೈ. ವಿಶ್ವನಾಥ ಶೆಟ್ಟಿ ಭಾಗವಹಿಸಿದ್ದರು. ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಸ್. ಪ್ರದೀಪ್‌ಸ್ವಾಗತಿಸಿದರು. ಡಾ. ಸಿ. ಸುನಿಲ್ ವಂದಿಸಿದರು.