ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಡಾ. ರಾಜ್ ಮತ್ತೊಮ್ಮೆ ಹುಟ್ಟಿ ಬರಲಿ

Rashmi Kasaragodu
Updated On : 25 Apr 2013, 11:23 am


ಕ.ಪ್ರ.ವಾರ್ತೆ, ಶಿವಮೊಗ್ಗ, ಏ.24 ನಗರದಲ್ಲಿ ಬುಧವಾರದ ಮಟ್ಟಿಗೆ ಸಂಭ್ರಮ ಮನೆ ಮಾಡಿತ್ತು. ವಿವಿಧ ಸಂಘ, ಸಂಸ್ಥೆ ಹಾಗೂ ಸಂಘಟನೆಗಳು ವರನಟ ಡಾ. ರಾಜ್ ಕುಮಾರ್ ಅವರ 83ನೇ ಹುಟ್ಟುಹಬ್ಬವನ್ನು ಆಚರಿಸಿದವು.
ಬಂಗಾರದ ಮನುಷ್ಯ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ನಗರದ ಗೋಪಿ ವೃತ್ತದಲ್ಲಿ ಸಾರ್ವಜನಿಕವಾಗಿ ಕೇಕ್ ಕತ್ತರಿಸಿ ಎಲ್ಲರಿಗೂ ವಿತರಿಸಲಾಯಿತು.
ನಂತರ ಮಾತನಾಡಿದ ಜಿಲ್ಲಾ ಛೇಂಬರ್ಸ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಶೆಟ್ಟಿ, ಡಾ. ರಾಜ್‌ಕುಮಾರ್ ಕರುನಾಡು ಕಂಡ ಅಪರೂಪದ ಕಲಾವಿದ. ಕನ್ನಡ ನಾಡು, ನುಡಿಗಾಗಿ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿದ್ದಾರೆ. ಇಂತಹ ಮಹಾನ್ ಚೈತನ್ಯ ಕರ್ನಾಟಕದಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸಿದರು.
ಬೆಳವಣಿಗೆ ಅಚ್ಚರಿ: ಬಡತನದ ಹಿನ್ನೆಲೆಯಿಂದ ಬಂದ ರಾಜ್, ಮುಂದೆ ಒಬ್ಬ ಮಹಾನ್ ಕಲಾವಿದನಾಗಿ ಬೆಳೆದ ದಾರಿ ಮಾತ್ರ ಅಚ್ಚರಿ ತಂದಿದೆ. ಇದರ ಹಿಂದೆ ಅವರ ಶ್ರಮ ಎಷ್ಟಿದೆ ಎಂಬುದು ತಿಳಿಯುತ್ತದೆ. ರಾಜ್‌ಕುಮಾರ್ ಅವರು ಕೇವಲ ಕಲೆಗಷ್ಟೇ ಸಿಮೀತವಾಗಿರಲಿಲ್ಲ. ಹೋರಾಟಗಳಲ್ಲಿಯೂ ಭಾಗವಹಿಸಿದ್ದರು ಎಂದ ಅವರು, ರಾಜ್ ಎಷ್ಟೇ ಎತ್ತರಕ್ಕೆ ಬೆಳೆದರೂ ಅಹಂಕಾರವಿಲ್ಲದೇ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದರು ಎಂದರು.
ಸಂಘದ ಅಧ್ಯಕ್ಷ ಎಸ್. ಚಿನ್ನಪ್ಪ ಮಾತನಾಡಿ, ಕಳೆದ 10 ವರ್ಷದಿಂದ ಸಂಘ ನಿರಂತರವಾಗಿ ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾ ಬಂದಿದ್ದು, ಇನ್ನೂ ಕೆಲವೇ ತಿಂಗಳಿನಲ್ಲಿ ಗೋಪಿ ವೃತ್ತದಲ್ಲಿ ಡಾ. ರಾಜ್‌ಕುಮಾರ್ ಅವರ ಪುತ್ಥಳಿಯನ್ನು ಅನಾವರಣ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಮಿಷನ್ ಕಾಂಪೌಂಡ್‌ನಲ್ಲಿರುವ ವಿಕಲಚೇತನರ ನೈಟಿಂಗೇಲ್ ಹ್ಯಾಪಿ ಹೋಂನಲ್ಲಿ ಅಗವಿಕಲ  ಮಕ್ಕಳಿಗೆ ಸಿಹಿ ವಿತರಣೆ ಹಾಗೂ ಭೋಜನಾ ಕೂಟ ಏರ್ಪಡಿಸಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ಎಸ್.ಕೆ. ರಾಘವೇಂದ್ರ, ಉಪಾಧ್ಯಕ್ಷ ಕುಮಾರ್ ಪಿ. ರಾಜು, ರೋಟರಿ ವಿದ್ಯಾ ಸಂಸ್ಥೆಯ ಜಿ. ವಿಜಯಕುಮಾರ್, ರಮೇಶ್ ಹಾಗೂ ಪದಾಧಿಕಾರಿಗಳು ಮತ್ತಿತರರು ಇದ್ದರು.
ಡಾ.ರಾಜ್ ಸಂಗೀತೋತ್ಸವ: ರಾಜ್‌ಕುಮಾರ್ ಹಾಡಿರುವ ಅಪರೂಪದ ಹಾಡುಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸುವ ಮತ್ತು ಅವರ ಸಾಧನೆಯನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಶಂಕರ ಸೈಕಲೋತ್ಸವ ಕುವೆಂಪು ರಂಗ ಮಂದಿರದಲ್ಲಿ ಡಾ. ರಾಜ್ ಸಂಗೀತೋತ್ಸವ ಏರ್ಪಡಿಸಿತ್ತು. ರಾಜ್ ಅವರ ಹಳೆಯ ಸುಮಧುರ ಗೀತೆಗಳನ್ನು ಕೇಳಲು ಸಾವಿರಾರು ಜನರು ಆಗಮಿಸಿದ್ದರು. ಒಂದರ್ಥದಲ್ಲಿ ರಂಗಮಂದಿರವೇ ರಾಜ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಹಲವರು ನಿಂತುಕೊಂಡೇ ಸಂಗೀತ ಆಲಿಸಿದರು.
 ಕಾರ್ಯಕ್ರಮದಲ್ಲಿ ಯುವ ಗಾಯಕ ಋತ್ವಿಕ್ ಮುರಳೀಧರ್, ಚೇತನ್ ಕುಮಾರ್, ಕೀರ್ತನಾ ಎಸ್.ಕುಮಾರ್, ಇಂಪನಾ, ಅಮಿತ್, ರಾಜ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪ ಚಿತ್ರದ ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ, ಆಕಸ್ಮಿಕ ಚಿತ್ರದ ಜನಪ್ರಿಯ ಗೀತೆ ಆಗುಂಬೆಯ ಪ್ರೇಮ ಸಂಜೆಯ ಹಾಡಿಗೆ ಅಭಿಮಾನಿಗಳಿಂದ ಬಾರಿ ಚಪ್ಪಾಳೆ ಗಿಟ್ಟಿಸಿದರು.
 ನಂತರ ಹೊಸಬೆಳಕು ಚಿತ್ರದ ಹೊಸಬೆಳಕು ಮೂಡುತಿದೆ..., ಎಲ್ಲೆಲ್ಲಿ ನೋಡಲಿ ನಿನ್ನನೆ ಕಾಣುವೆ.. ಹಾಡುಗಳು ಕೇಳುಗರ ಪ್ರಶಂಸೆಗೆ ಪಾತ್ರವಾಯಿತು.
ಈ ವೇಳೆ ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಹರಿಕುಮಾರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement