ದೇವಪುರದಲ್ಲಿ ಗೂಳಿಹಟ್ಟಿ ಮತ ಯಾಚನೆ
ಹೊಸದುರ್ಗ: ತಾಲೂಕಿನ ಮಾಡದಕೆರೆ ಹೋಬಳಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕ ಗೂಳಿಹಟ್ಟಿ ಶೇಖರ್ ಅಪಾರ ಬೆಂಬಲಿಗರೊಂದಿಗೆ ಮತ ಯಾಚಿಸಿದರು. ಮಾಡದಕೆರೆಯ ದೇವಪುರ ಮತ್ತಿತರ ಗ್ರಾಮಗಳಲ್ಲಿ ಮತ ಯಾಚಿಸಿ ಮಾತನಾಡಿದ ಅವರು, ಜಾತಿ ಭೇದ ಮರೆತು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಎಲ್ಲ ವರ್ಗಗಳ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಿದ್ದೇನೆ ಎಂದರು.
ನಾನು ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮುಂದೆಯೂ ಅಭಿವೃದ್ಧಿ ಕಾರ್ಯ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ಜನ ಬೆಂಬಲ ಇದ್ದೇ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಳ್ಳಿಗಳಲ್ಲಿ ವಿದ್ಯುತ್, ನೀರು, ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಕಳೆದ 5 ವರ್ಷದಲ್ಲಿ ಅನರ್ಹ ವರ್ಷ ಹೊರತು ಪಡಿಸಿದರೆ ನಂತರ ವಿಶೇಷ ಅನುದಾನದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ದೇಗುಲ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದರು.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹೆಚ್ಚಿನ ಬೆಂಬಲವಿದ್ದು, ಮುಂದೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿ ಮಾದರಿ ತಾಲೂಕು ಮಾಡುವುದಾಗಿ ತಿಳಿಸಿದ ಅವರು, ತಾಲೂಕಿಗೆ ಮಾಡಿದ ಸೇವೆಯನ್ನು ಗುರುತಿಸಿ ನನಗೆ ಮತ ಹಾಕಲಿದ್ದಾರೆ ಎಂದರು. ವಕೀಲ ಕಲ್ಮಠ್, ಪ್ರಕಾಶಣ್ಣ, ಕರಿಯಪ್ಪ, ರಂಗಸ್ವಾಮಿ, ಬೆನಕನಹಳ್ಳಿ ತಿಪ್ಪೇಶ್, ದುಗ್ಗಾವರದ ಜಯಣ್ಣ, ಹೊನ್ನೇನಹಳ್ಳಿ ಪರಮೇಶ್ವರಪ್ಪ ಇದ್ದರು.