ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ ಕೋಟೆ ರಕ್ಷಣೆಗೆ 1 ಬೂತ್ 10 ಯೂತ್ಸ್

Rashmi Kasaragodu
Updated On : 25 Apr 2013, 11:19 am

 ಶ್ರೀಕಾಂತ ಭಟ್
ಶಿವಮೊಗ್ಗ: ಮಲೆನಾಡು ಬಿಜೆಪಿಯ ಭದ್ರಕೋಟೆ. ಆದರೆ, ಈಗಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭದ್ರಕೋಟೆಯು ಅಲುಗಾಡಲಾರಂಭವಾಗಿದ್ದು, ಅಸ್ತಿತ್ವ ಉಳಿಸಿಕೊಳ್ಳಲೋಸಗ ಭಗೀರಥ ಪ್ರಯತ್ನವೇ ನಡೆದಿದೆ. ತರಹವೇರಿ ತಂತ್ರಗಾರಿಕೆ ರೂಪಿಸಲಾಗುತ್ತಿದೆ.
  ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ರಣತಂತ್ರರೂಪಿಸುವ ಕೇಂದ್ರವಾಗಿ ಮಾರ್ಪಟ್ಟಿದೆ.
 ಪಕ್ಷವು 1-2 ದಶಕದ ಹಿಂದೆ ನಡೆಸಲಾಗುತ್ತಿದ್ದ ಸಿದ್ಧತೆ, ಪೂರ್ವ ತಯಾರಿಯನ್ನು ನೆನಪಿಸುವಂತೆ ಬಿರುಸಿನ ಚಟುವಟಿಕೆ ನಡೆದಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಬಿಡುವಿಲ್ಲದೇ ತೊಡಗಿಕೊಂಡಿದ್ದಾರೆ.
ಮನೆ ಮನೆ ಭೇಟಿ: ಮುಖ ಕೆಡಿಸಿಕೊಂಡ ಪಕ್ಷದ ನಾಯಕರ ಮುಖವಾಡ ಕಳಚಿಟ್ಟು ಈ ಬಾರಿ ಪಕ್ಷಕ್ಕೆ ಮತ ನೀಡಿ ಎಂಬ ತಂತ್ರಗಾರಿಕೆಯೊಂದಿಗೆ ಕಾರ್ಯಕರ್ತರನ್ನು ಕಣಕ್ಕಿಳಿಸುತ್ತಿರುವುದು ವಿಶೇಷ.
  ಕಾರ್ಯಕರ್ತರ ಮನೆ ಮನೆ ಭೇಟಿ ಸಂದರ್ಭದಲ್ಲಿ ಪ್ರಧಾನವಾಗಿ ಕಂಡುಬರುತ್ತಿರುವುದು ಬಿಜೆಪಿ ಮತಕೊಡಿ, ಕಮಲಕ್ಕೆ ಮತ ನೀಡಿ ಎಂದೇ ಕೇಳುತ್ತಿದ್ದಾರೆ, ಅಭ್ಯರ್ಥಿಗಳ ಹೆಸರು ಗೌಣ.
ನೆಚ್ಚಿಕೊಂಡ ಅಂಶಗಳು: ಜಿಲ್ಲೆ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದರಿತ ಬಿಜೆಪಿ ನಾಯಕರು, ಗೆಲ್ಲಬಹುದಾದ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಉಳಿದ ಕಡೆಗಳಲ್ಲಿ ಪ್ರಯತ್ನವನ್ನಷ್ಟೇ ನಡೆಸಿದ್ದಾರೆ.
ಒನ್ ಬೂತ್ 10 ಯೂತ್ಸ್: ಹೀಗಾಗಿ ಗೆಲ್ಲುವ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. ಇದರಲ್ಲಿ ಒನ್ ಬೂತ್ 10 ಯೂತ್ಸ್ ಎಂಬುದು ಬಿಜೆಪಿಯ ಹಳೆಯ ತಂತ್ರ.
  ಅದನ್ನು ಈಗ ಮರು ಜಾರಿಗೆ ತರಲಾಗಿದೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ 217 ಬೂತ್‌ಮಟ್ಟದಲ್ಲಿ ಯುವಕರ ಗುಂಪು ಮುಖಂಡರ ಆದೇಶದಂತೆ ಬೇರು ಮಟ್ಟದಲ್ಲಿ ಚಟುವಟಿಕೆ ನಡೆಸುತ್ತಿದೆ.
  ಸಾವಿರ ಕಾರ್ಯಕರ್ತರು, ಪ್ರತಿ ಕಾರ್ಯಕರ್ತನಿಗೆ ಹತ್ತು ಮನೆ. ಗರಿಷ್ಠ ಮತದಾನ, ಇದೇ ಬಿಜೆಪಿ ಗೆಲುವಿನ ಸೂತ್ರ ಎಂದೂ ಬಿಂಬಿಸಲಾಗುತ್ತಿದೆ.
ವರ್ಗಶ; ತಂತ್ರ: ಶಿಕ್ಷಕ ಸಮುದಾಯ ಹಾಗೂ ಶಿಕ್ಷಣ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.
  ಭದ್ರಾವತಿಯಲ್ಲಿ ಒಕ್ಕಲಿಗ ಸಮುದಾಯದ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಿತ್ರನಟ ಜಗ್ಗೇಶ್ ಅವರನ್ನು ಪ್ರಚಾರಕ್ಕೆ ಕರೆಸಲಾಗುತ್ತಿದೆ.
 ಅದೇ ರೀತಿ, ಸೊರಬ ಕ್ಷೇತ್ರದ ಆನವಟ್ಟಿ ಭಾಗದಲ್ಲಿರುವ ಲಿಂಗಾಯಿತ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಸಿಎಂ ಜಗದೀಶ್ ಶೆಟ್ಟರ್ ಅವರ ಕಾರ್ಯಕ್ರಮ ಜೋಡಿಸಲಾಗಿದೆ.
   ಇವರೊಂದಿಗೆ ಮಲೆನಾಡು ಭಾಗದಲ್ಲಿನ ಪ್ರಮುಖ ರಾಜಕೀಯ ಮುತ್ಸದ್ದಿ ಹಾಗೂ ಒಕ್ಕಲಿಗ ಸಮುದಾಯದ ಪ್ರಮುಖ ಡಿ.ಬಿ. ಚಂದ್ರೇಗೌಡರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ.
   ಉಳಿದಂತೆ ಬಿಜೆಪಿ ವರಿಷ್ಠರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಶಿವಮೊಗ್ಗಕ್ಕೆ ಬರುತ್ತಿದ್ದಾರೆ.
ನಿರಂತರ ಸಭೆ: ಹಿರಿಯ ಕಾರ್ಯಕರ್ತರ ಸಭೆ, ಸಂಘ ಸಂಸ್ಥೆಗಳ ಪ್ರಮುಖರ ಸಭೆ, ಉದ್ಯಮಿಗಳ ಸಭೆ, ವಿವಿದ ಸಮುದಾಯದ ಮುಖಂಡರ ಸಭೆ, ಮಹಿಳಾ ಕಾರ್ಯಕರ್ತರ ಸಭೆ, ಸ್ತ್ರೀಶಕ್ತಿ ಸಂಘಟನೆಗಳ ಸಭೆ, ಹೀಗೆ ವ್ಯವಸ್ಥಿತ ರೀತಿಯ ಸಭೆಗಳನ್ನು ಬಿಜೆಪಿ ನಡೆಸಲಾರಂಭಿಸಿದೆ.
  ಇದರೊಂದಿಗೆ ಕಲಾವಿದರು, ಕಾರ್ಮಿಕರು, ಧಾರ್ಮಿಕ ಮುಖಂಡರು ಸೇರಿದಂತೆ ವರ್ಗಶ- ಸಭೆ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement