ಚುನಾವಣೆ ಸಂಬಂಧಿ ಜಿಲ್ಲಾದ್ಯಂತ 177 ದೂರು
ಕ.ಪ್ರ.ವಾರ್ತೆ ಶಿವಮೊಗ್ಗ ಏ. 25
ಈ ಬಾರಿ ಚುನಾವಣೆ ಕಣಕ್ಕಿಳಿದಿರುವ ಬಹುತೇಕ ಪ್ರಮುಖ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಮಕ್ಕಳು ಭಾಗವಹಿಸಿದ್ದರಿಂದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಕೆ.ಎಸ್. ಈಶ್ವರಪ್ಪ (ಬಿಜೆಪಿ), ಎಸ್. ರುದ್ರೇಗೌಡ (ಕೆಜೆಪಿ), ಎಂ. ಶ್ರೀಕಾಂತ್(ಜೆಡಿಎಸ್), ಕೆ.ಬಿ. ಪ್ರಸನ್ನಕುಮಾರ್(ಕಾಂಗ್ರೆಸ್), ಇಜಾಜ್ ಪಾಶಾ (ಪಕ್ಷೇತರ) ಅವರ ವಿರುದ್ಧ ಮಕ್ಕಳ ರಕ್ಷಣೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ನೋಟಿಸ್ ನೀಡಲಾಗಿದೆ.
ಈಶ್ವರಪ್ಪ ವಿರುದ್ಧ 2 ಪ್ರಕರಣ: ಇದಲ್ಲದೇ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿದ ಬಗ್ಗೆ ಹಾಗೂ ಆರತಿ ತಟ್ಟೆಗೆ ಹಣ ಹಾಕಿದ ಬಗ್ಗೆ ಕೆ.ಎಸ್. ಈಶ್ವರಪ್ಪ ಅವರ ಎರಡು ಪ್ರಕರಣಗಳು ದಾಖಲಾಗಿವೆ.
ಅನುಮತಿ ಪಡೆಯದೇ ಮೆರವಣಗೆ ನಡೆಸಿದ್ದರಿಂದ ಸೊರಬ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರ ವಿರುದ್ಧ ಎರಡು ಪ್ರಕರಣ, ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ವಿರುದ್ಧ ಒಂದು ಹಾಗೂ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಕುಮಾರಸ್ವಾಮಿ ವಿರುದ್ಧ ಒಂದು ಪ್ರಕರಣ ದಾಖಲಾಗಿವೆ.
ಒಟ್ಟು 177 ಪ್ರಕರಣ: ಜಿಲ್ಲೆಯಾದ್ಯಂತ ಏ.24ರ ವರೆಗೆ ಪೊಲೀಸ್ ಇಲಾಖೆಯಲ್ಲಿ 32 ಪ್ರಕರಣಗಳು, ಅಬಾರಿ ಇಲಾಖೆಯಲ್ಲಿ 145 ಪ್ರಕರಣಗಳು ಸೇರಿ ಒಟ್ಟು 177 ಪ್ರಕರಣ ದಾಖಲಾಗಿವೆ. ಈ ಸಂಬಂಧ 60ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ.
ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಹಣ ವಶ: ವಿವಿಧ ಪ್ರಕರಣಗಳಲ್ಲಿ ಜಿಲ್ಲೆಯಾದ್ಯಂತ 11,27,000 ರು. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯು ಕಾರ್ಯಾಚರಣೆ ಮೂಲಕ ಮದ್ಯ ವಶಪಡಿಸಿಕೊಂಡ 58 ಪ್ರಕರಣ ದಾಖಲಾಗಿವೆ.
ಜಿಲ್ಲೆಯಾದ್ಯಂತ ಅಬ್ಕಾರಿ ಇಲಾಖೆಯೂ ಸೇರಿ ಒಟ್ಟು 203 ಪ್ರಕರಣಗಳಲ್ಲಿ 7 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 32 ಲಕ್ಷ ರು. ಈ ಪ್ರಕರಣಗಳಲ್ಲಿ 110 ಜನರನ್ನು ಬಂಧಿಸಲಾಗಿದೆ.
ದೂರುಗಳನ್ನು ಸ್ವೀಕರಿಸುವುದಕ್ಕಾಗಿಯೇ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ಇದೂವರೆಗೆ 223 ದೂರುಗಳು ಬಂದಿವೆ. ಇವುಗಳನ್ನು 222 ಪ್ರಕರಣಗಳು ವಿಲೆ ಆಗಿವೆ. 74 ಸುಳ್ಳು ದೂರುಗಳು ಬಂದಿದ್ದು ಗೊತ್ತಾಗಿದೆ.
ಗುಂಪು ಘರ್ಷಣೆ: ಹೊಸನಗರ ತಾಲೂಕು ನಗರ ಹೋಬಳಿಯ ಗಿಣಿಕಲಲ್ಪ್ರದೇಶದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಅವರು ಪ್ರಚಾರಕ್ಕೆಂದು ಬಂದಾಗ ಕಾಂಗ್ರೆಸ್‌ನ ಒಂದು ಗುಂಪು ಅಡ್ಡಿಯನ್ನುಂಟು ಮಾಡಿತು. ಆಗ ಗುಂಪು ಘರ್ಷಣೆ ಸಂಭವಿಸಿದೆ. ಪರಿಸ್ಥಿತಿ ನಿಯಂತ್ರಿಸಲಾಯಿತು ಎಂದು ಎಸ್ಪಿ ಕೌಶಲೇಂದ್ರ ಕುಮಾರ್ ಹೇಳಿದ್ದಾರೆ.
27 ರಂದು ಖರ್ಚು ವೆಚ್ಚ ಪರಿಶೀಲನೆ
ಸೊರಬ: ಸೊರಬ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ 2013ರ ಖರ್ಚು ವೆಚ್ಚ ವೀಕ್ಷಕ ವನಲಾಲ್ ಚುವಾಂಗ್ ಇವರು ಏ. 27 ರಂದು ತಾಲೂಕು ಕಚೇರಿಯ ಮೊದಲನೇ ಮಹಡಿ ಸಭಾಂಗಣದಲ್ಲಿ ಎಲ್ಲ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚದ 2 ನೇ ಪರಿಶೀಲನೆ ಮಾಡಲಿದ್ದಾರೆ.
ಆದ್ದರಿಂದ ಸೊರಬ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಲೆಕ್ಕಪರಿಶೀಲನೆಗೆ ಹಾಜರು ಪಡಿಸಲು ಸೂಚಿಸಿದ್ದಾರೆ.
ಹೆಚ್ಚಿ ಮಾಹಿತಿಗಾಗಿ ಚುನಾವಣಾ ಸಹಾಯಕ, ಖರ್ಚು ವೆಚ್ಚದ ವೀಕ್ಷಕ ಪ್ರಮೋದ್ ಕುಮಾರ್ ಮೊ. ಸಂ 9620550856 ಮೂಲಕ ಸಂಪರ್ಕಿಸಬಹುದು.