ಬಿಎಸ್ವೈ ವಿರುದ್ಧ ಸಿಎಂ ಗುಡುಗು
ಕ.ಪ್ರ.ವಾರ್ತ್ಣೆ ಆನವಟ್ಟ್ಣಿ ಏ.25
ಮಾಜಿ ಸಿಎಂ ಬಿಎಸ್ವೈ ಹಾಗೂ ಹರತಾಳು ಹಾಲಪ್ಪ ವಿರುದ್ಧ ಸಿಎಂ ಜಗದೀಶ್ ಶೆಟ್ಟರ್ ಹರಿಹಾಯ್ದಿದ್ದು, ಮತದಾರರು ಇವರಿಗೆ ತಕ್ಕಪಾಠ ಕಲಿಸಬೇಕೆಂದು ಕರೆ ನೀಡಿದ್ದಾರೆ.
ಸೊರಬ ತಾಲೂಕು ಆನವಟ್ಟಿಯಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶೆಟ್ಟರ್, ಸರ್ಕಾರವನ್ನು ಬುಡಮೇಲು ಮಾಡಲು ಹೊರಟವರ ಸ್ಥಿತಿ ಏನಾಗುತ್ತದೆ ಎಂಬುದು ಸದ್ಯವೇ ಗೊತ್ತಾಗುತ್ತದೆ.
ಜೊತೆಗೆ ಅಂತಹವರ ಭವಿಷ್ಯ ಮೇ 5ರಂದ ನಿರ್ಧಾರವಾಗಲಿದೆ ಎಂದು ಬಿಎಸ್ವೈ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ರು.
ಬಿಎಸ್ವೈಗೆ ಟೀಕೆ: ನನಗೆ ಸಿಎಂ ಆಗಬೇಕೆಂದು ಮನಸ್ಸು ಇರಲಿಲ್ಲ, ಜನರ ಆಶೀರ್ವಾದದಿಂದ ಹಾಗೂ ಶಾಸಕರ ಒತ್ತಾಯದಿಂದ ಸಿಎಂ ಆದೆ. ಆದರೆ, ಸಿಎಂ ಆಗಿ ಒಂದು ತಿಂಗಳೊಳಗೆ ಸರ್ಕಾರ ಬಿದ್ದುಹೋಗುತ್ತೆ ಎಂಬ ಮಾತು ಬಂತು.
ಆ ಮಾತನ್ನು ಹೇಳಿದ್ದು ನಿಮ್ಮ ಜಿಲ್ಲೆಯವರೇ, ಕೆಜೆಪಿ ನಾಯಕರು ಎಂದು ಯಡಿಯೂರಪ್ಪನವರನ್ನು ಟೀಕಿಸಿದರು.
ಜಗತ್ತಿನ ಯಾವುದೇ ಶಕ್ತಿ ಅಡ್ಡಬಂದರೂ ಸರ್ಕಾರ ಮುಂದುವರಿಸುವ ವಿಶ್ವಾಸವಿತ್ತು. ಫೆಬ್ರವರಿಯಲ್ಲಿ ಬಜೆಟ್ ಮಂಡನೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೆಲವರಲ್ಲಿ ನಡುಕ ಉಂಟಾಗುತ್ತದೆ. ಬಜೆಟ್ ಮಂಡನೆ ಸಾಧ್ಯವೇ ಇಲ್ಲ, ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಅನೇಕರು ಮಾತನಾಡಿದರು. ನಾನು ಉತ್ತಮ ಜನಪರ ಬಜೆಟ್ ಮಂಡಿಸಿದೆ.
ಮತ್ತೆ ನಡೆದ ಬೆಳವಣಿಗೆಯಲ್ಲಿ 12 ಶಾಸಕರು ರಾಜಿನಾಮೆ ನೀಡಿದರು. ಈ ಪೈಕಿ ಸೊರಬ ಶಾಸಕ ಹಾಲಪ್ಪನವರೂ ಕೂಡ ಒಬ್ಬರು ಎಂದು ವಿವರಿಸಿದರು.
ಹಾಲಪ್ಪನವರು ಸೊರಬ ಜನರ ಬೆಂಬಲ ಹಾಗೂ ಪಕ್ಷ ನಿಷ್ಠೆ ಮರೆತು ನಂಬಿಕೆ ದ್ರೋಹ ಮಾಡಿದರು. ಜನರು ಮತ ನೀಡಿ ಗೆಲ್ಲಿಸಿದರೆ ಯಾರೋ ಹೇಳಿದರೆಂದು ರಾಜಿನಾಮೆ ಕೊಟ್ಟಿದ್ದು ಜನತೆಗೆ ಮಾಡಿದ ದ್ರೋಹ ಎಂದು ಹಾಲಪ್ಪನವರನ್ನು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.
ನಿಮ್ಮ ಮಾತು ಮೀರಿ ಪಕ್ಷಾಂತರ ಮಾಡಿದವರಿಗೆ ಪಾಠ ಕಲಿಸುವ ಸಮಯ ಬಂದಿದ್ದು, ಸೂಕ್ತ ಉತ್ತರ ಕೊಡಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಹಣೆಬರಹ ಇಷ್ಟೆ: ರಾಜ್ಯದಲ್ಲಿ ಬಿಜೆಪಿಯ ಎದುರಾಳಿ ಕಾಂಗ್ರೆಸ್.
ಆ ಪಕ್ಷ ಬಹುಮತದ ಹತ್ತಿರವೂ ಹೋಗಲು ಸಾಧ್ಯವಿಲ್ಲ ಎಂದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ. ಈ ಚುನಾವಣೆಗೆ ಮುಂಚಿತವಾಗಿ ಸಿಎಂ ಅಭ್ಯರ್ಥಿ ಜಗದೀಶ ಶೆಟ್ಟರ್ ಎಂದು ಪ್ರಕಟಿಸಿತು. ಆದರೆ, ಮತ್ತೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನಲ್ಲಿ ಗೊಂದಲ ಮುಂದುವರಿದಿದೆ, ಅದರ ಹಣೆಬರವೇ ವಿಚಿತ್ರವಾಗಿದೆ ಎಂದು ಲೇವಡಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಾವು ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಹೇಳಿದ್ದಾರೆ. ಸಿಎಂ ಮಾಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ನಿಂದ ಹೊರಬಂದು ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯನವರು ಅನೇಕ ವರ್ಷಗಳಿಂದ ತಾವು ಸಿಎಂ ಆಕಾಂಕ್ಷಿ ಎಂದು ಹೇಳಿಕೊಂಡು ಹಠ ಹಿಡಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕೃಷ್ಣ ಕೂಡ ಸಿಎಂ ಹುದ್ದೆಯ ಆಕಾಂಕ್ಷಿಗಳು.
ಈಗಾಗಲೇ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಜನರಲ್ಲಿ ಬಿಜೆಪಿ ಬಗ್ಗೆ ಹೆಚ್ಚಿನ ಒಲವು ಇರುವುದು ಕಂಡುಬಂದಿದೆ. ಬಿಜೆಪಿ ಸರ್ಕಾರದ ಐದು ವರ್ಷದ ಸಾಧನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗುವುದರಲ್ಲಿ ಯಾವುದೇ ಅನುಮನವಿಲ್ಲ ಎಂದರು.
ದೇಶದ ಎಲ್ಲೆಲ್ಲಿ ಬಿಜೆಪಿ ಸರ್ಕಾರ ಇದೆಯೋ ಅಲ್ಲೆಲ್ಲಾ ಬದಲಾವಣೆ ಕಂಡಿದೆ, ಸಾಕಷ್ಟು ಅಭಿವೃದ್ಧಿಯಾಗಿದೆ. ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಜನತೆ ಬಿಜೆಪಿಯನ್ನು ಮರು ಆಯ್ಕೆ ಮಾಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಜನತೆ ಇನ್ನೂ ಮರೆತಿಲ್ಲ ಎಂದರು.
1 ರುಪಾಯಿಗೆ ಕೆಜಿ ಅಕ್ಕಿ, ಮಕ್ಕಳಿಗೆ ಲ್ಯಾಪ್ಟಾಪ್ ಹೀಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತರುವ ಕನಸಿನೊಂದಿಗೆ ಬಿಜೆಪಿ ಪ್ರಣಾಳಿಕೆ ಜಾರಿಗೆ ತಂದರೆ, ಕಾಂಗ್ರೆಸ್ ಪಕ್ಷವು ಬಿಜೆಪಿ ಪ್ರಣಾಳಿಕೆಯ ನಕಲು ಮಾಡಿದೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಸಂಸದ ಆಯನೂರು ಮಂಜುನಾಥ್, ಜಿ.ಪಂ.ಸದಸ್ಯ ದಾನಿ ರುದ್ರಪ್ಪ, ಪಾಣಿರಾಜಪ್ಪ, ಪದ್ಮನಾಭ ಭಟ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಸೊರಬ ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜ ಗೌಡ ಮತ್ತಿತರರು ಇದ್ದರು.