ಮರದ ದಿಮ್ಮಿಗೆ ಬೈಕ್ ಡಿಕ್ಕಿ: ಸಾವು
ಸಾಗರ: ತಾಲೂಕಿನ ಆನಂದಪುರಂ ಸಮೀಪದ ಡ್ಯಾಂ ಹೊಸೂರು ರಸ್ತೆಯ ತಿರುವಿನಲ್ಲಿದ್ದ ಮರದ ದಿಮ್ಮಿಗೆ ಬೈಕ್ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗೌತಮಪುರದಿಂದ ಶಿಕಾರಿಪುರಕ್ಕೆ ಯಮಹಾ ಬೈಕಿನಲ್ಲಿ ಹೊರಟಿದ್ದ ಶಿಕಾರಿಪುರದ ಹರಿಹರಪುರದ ನಿವಾಸಿ ಸುರೇಶ್ (26) ಮೃತಪಟ್ಟ ವ್ಯಕ್ತಿ. ಬೈಕಿನ ಹಿಂಬದಿ ಕುಳಿತಿದ್ದ ಮಂಜಪ್ಪ ಎಂಬುವವರು ಗಂಭೀರವಾಗಿ ಗಾಯಗೊಂಡು ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಮಳೆ
ಸೊರಬ: ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣ ಜನಜೀವನ ಅಸ್ತವ್ಯಸ್ತವಾಗಿತ್ತು.ಸಂಜೆ 5-6 ಗಂಟೆಯಿಂದಲೇ ಮೋಡ ಕವಿದು, ಬಿರುಗಾಳಿ ಬೀಸಲಾರಂಬಿಸಿತ್ತು. ಪಟ್ಟಣದ ಕೆಲ ತಗಡಿನ ಚಾವಣಿಗಳು ಗಾಳಿಗೆ ಸಿಲುಕಿ ಹಾರಿಬಿದ್ದವು. ಭಾರಿ ಗಾಳಿಯೊಂದಿಗೆ ಆಲಿಕಲ್ಲಿನ ಮಳೆ ಸುರಿದು, ಪಟ್ಟಣದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಸುಮಾರು 3 ತಾಸು ಸುರಿದ ಮಳೆಯಿಂದಾಗಿ ಸೊರಬ ಆನವಟ್ಟಿ, ಬನವಾಸಿ ರಸ್ತೆ ಸಂಪರ್ಕ ಮರ ಬಿದ್ದುದರಿಂದ ಕೆಲಕಾಲ ಕಡಿತಗೊಂಡಿತ್ತು. ಮಾವಲಿ ಗ್ರಾಮದ ಅಂಗಡಿಯೊಂದರ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ.