ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಯ

Rashmi Kasaragodu
Updated On : 26 Apr 2013, 10:42 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.25
ರಾಜ್ಯದಲ್ಲಿ ಎಲ್ಲಾ ವರ್ಗದವರಿಗೆ ಕೆಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಕೊಟ್ಟು ರಾಜ್ಯದಲ್ಲಿ 200ಕ್ಕೂ ಹೆಚ್ಚು  ಕ್ಷೇತ್ರಗಳಲ್ಲಿ ಪ್ರಚಾರ ಮುಗಿಸಿದ್ದೇನೆ. ರಾಜ್ಯದಲ್ಲಿ ಕೆಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಜನರು ನಿಶ್ಚಯ ಮಾಡಿದ್ದಾರೆ ಅದನ್ನು ಯಾರಿಂದಲೂ ತಪ್ಪಿಸಲಾಗುವದಿಲ್ಲ ಎಂದು ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
  ತಾಲೂಕಿನ ತೊಗರ್ಸಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನಲ್ಲಿ ನಾನು ಮಾಡಿದ ಕೆಲಸ ಕಾರ್ಯಗಳಿಗೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತು.
   ಆದರೆ ವಿರೋಧಿಗಳ ಕುತಂತ್ರದಿಂದ ಇಂದು ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸಬೇಕಾಗಿದೆ. ಈ ಚುನಾವಣೆಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲಿಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದರು.
ನೆಮ್ಮದಿಯ ಜೀವನ: ರಾಜ್ಯದಲ್ಲಿ 60ವರ್ಷ ಮೇಲಿನ ರೈತರಿಗೆ ಪ್ರತಿ ತಿಂಗಳು ಪೆನ್ಷನ್ ರೂಪದಲ್ಲಿ ರು. 500 ಕೊಡಬೇಕು ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದೇನೆ ಹಾಗೆಯೇ ಕೇಂದ್ರ ಸರ್ಕಾರ ನಮ್ಮ ಯೋಜನೆಗೆ ಕೈಜೋಡಿಸಿ 500ರೂ ಕೊಟ್ಟರೆ ರೈತ ತನ್ನ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಅನಕೂಲವಾಗುತ್ತದೆ ಎಂದರು.
    ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೇಕಾರರು, ರೈತರು, ಹಾಗೂ ಸ್ವಸಹಾಯ ಸಂಘಗಳ ಲಕ್ಷ ರೂ ವರೆಗಿನ ಸಾಲಮನ್ನಾ ಮಾಡಲಾಗುವುದು ಎಂದ ಅರು ಸ್ತ್ರೀಶಕ್ತಿ ಮತ್ತು ಮಹಿಳಾ ಮಂಡಳಿಗಳಿಗೆ ಗುಡಿಕೈಗಾರಿಕೆ ಹಾಗು ಇತರ ಕಾರ್ಯಗಳಿಗೆ ರು. 2,000 ಕೋಟಿ ಹಣವನ್ನು ಮೀಸಲಿಡುವ ಯೋಜನೆ ಕೈಗೊಳ್ಳಲಾಗುವುದು ಎಂದರು.
ಅಭಿವೃದ್ಧಿ: ರಾಜ್ಯದಲ್ಲಿ ಪ.ಪಂಗಡ ಹಾಗೂ ಪ.ಜಾತಿ ಅವರಿಗೆ ರು. 5,000 ಕೋಟಿ ವೀಸಲಿಟ್ಟು ಅವರ ಸಂಪೂರ್ಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.  ಹಿಂದು -ಮುಸ್ಲೀಮ ಒಂದಾಗಿ ಬಾಳಬೇಕು ಎಂದು ನಮ್ಮ ಪಕ್ಷದ ಅಪೇಕ್ಷೆ ಎಂದರು.
  ಇತ್ತಿಚೆಗೆ ಜೆಡಿಎಸ್ ಬಿಟ್ಟು ಕೆಜೆಪಿಗೆ ಆಗಮಿಸಿದ್ದ ತಡಗಣಿ ಗ್ರಾಪಂ ಅಧ್ಯಕ್ಷ ತಡಗಣಿ ಮಂಜುನಾಥ ಮಾತನಾಡಿ, ಭಾರತದಲ್ಲಿ ಸುವರ್ಣಾಕ್ಷರದಲ್ಲಿ ಬರದಿಡುವಂತೆ ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಯಡಿಯೂರಪ್ಪನವರನ್ನು ವಿರೋಧಿಸುತ್ತಿರುವ ವಿರೋಧಿಗಳು ಯಾರೊಬ್ಬರೂ ಇಂತಹ ಒಂದೇ ಒಂದು ಕೆಲಸ ಮಾಡಲಿಲ್ಲ ಎಂದರು.
   ಅಗಡಿ ಅಶೋಕ ತೊಗರ್ಸಿ ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ, ತಾಪಂ ಮಾಜಿ ಅಧ್ಯಕ್ಷ ರೇವಣಪ್ಪ, ನಿವೃತ್ತ  ಐಎಎಸ್ ಅಧಿಕಾರಿ ಗಂಗಾಧರಪ್ಪ ಸೇರಿದಂತೆ ಹಲವಾರು ಪ್ರಮುಖರು ಇದ್ದರು.
 ಸಾಗರ
ಕೆಜೆಪಿ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಕೋ-ಆಪರೇಟಿವ್ ಬ್ಯಾಂಕ್ ನಿರ್ಮಿಸಿ 2000 ಕೋಟಿ ಹಣವನ್ನು ಮೀಸಲಾಗಿಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿನ ಗಾಂಧಿಮೈದಾನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಬಿ.ಆರ್. ಜಯಂತ್ ಮತ್ತು ಸೊರಬ ಅಭ್ಯರ್ಥಿ ಎಚ್. ಹಾಲಪ್ಪ ಅವರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
ನೆಮ್ಮದಿ ಬರಲಿ: ರಾಜ್ಯದ ರೈತ ಸಮುದಾಯಕ್ಕೆ ವಿಶೇಷ ಕೊಡುಗೆಯಾಗಿ 65 ವರ್ಷ ಪೂರೈಸಿರುವ ಎಲ್ಲ ರೈತರಿಗೆ ಮಾಸಿಕ ನಿವೃತ್ತಿ ವೇತನ ನೀಡುವುದಾಗಿ ಘೋಷಿಸಿದರು. ರಾಜ್ಯದ ಎಲ್ಲಡೆ ಮಳೆ ಚೆನ್ನಾಗಿ ಬರಲಿ. ನೀರಿನ ಸಮಸ್ಯೆ ನಿವಾರಣೆಯಾಗಿ ಎಲ್ಲಾ ಜನಸಮುದಾಯದವರು ನೆಮ್ಮದಿಯಿಂದ ಬದುಕುವಂತಾಗಲಿ ಎಂದರು.
ಮತದಾರರು ಕೆಜೆಪಿಗೆ ಮತ ನೀಡಿ ಬಿ.ಆರ್. ಜಯಂತ್ ಮತ್ತು ಹರತಾಳು ಹಾಲಪ್ಪನವರನ್ನು ಗೆಲ್ಲಿಸುವ ಮೂಲಕ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಇಷ್ಟರಲ್ಲಾಗಲಿ ಧೋ..ಎಂದು ಮಳೆ ಸುರಿಯಲಾರಂಭಿಸಿತು. ಸಭೆಯಲ್ಲಿ ನೆರೆದಿರುವ ಜನಸ್ತೋಮ ಖುರ್ಚಿಗಳನ್ನೆ ತಲೆಮೇಲೆ ಹೊತ್ತುಕೊಂಡು ಮಳೆಯಿಂದ ರಕ್ಷಣೆ ಪಡೆಯಲು ನಗರಸಭೆ ಕಟ್ಟಡದ ಕಡೆಗೆ ನುಗ್ಗಲು ಪ್ರಾರಂಭಿಸಿದರು.
ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಆರ್. ಜಯಂತ್, ಸೊರಬ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್. ಹಾಲಪ್ಪ, ಪಕ್ಷದ ಪ್ರಮುಖರಾದ ಟಿ.ಡಿ. ಮೇಘರಾಜ್, ಶಿಕಾರಿಪುರದ ಗುರುಮೂರ್ತಿ, ಜಾಹೀದಾಬೇಗಂ, ಸರಸ್ವತಿನಾಗರಾಜ್, ವಿ. ಮಹೇಶ್, ಹಸನಬ್ಬ, ಪ್ರಕಾಶ್ ಕುಂಠೆ, ರಾಮಣ್ಣಗಾಣಿಗ, ರಾಧಾಕೃಷ್ಣ ನಾಯಕ್ ಬೇಂಗ್ರೆ, ಸಬಾಸ್ಟಿನ್ ಗೋಮ್ಸ್, ಸೈಯದ್ ಇಕ್ಬಾಲ್, ಮುನಾವರ್, ಸೋಮಶೇಖರ್ ವೀರಾಪುರ, ರಘುಪತಿ, ಆರ್.ಎಸ್. ಗಿರಿ, ಮರುಳಸಿದ್ದಪ್ಪ, ವೆಂಕಟರಮಣ, ಗಣೇಶಪ್ರಸಾದ್, ಕೆರೆಕೈ ಪ್ರಸನ್ನ, ವಾದಿರಾಜ್ ಹಾಜರಿದ್ದರು.
 ಸೊರಬ
ಬಗರ್ ಹುಕುಂ ಸಾಗುವಳಿದಾರರ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸುವ ಕಾಗೋಡು ತಿಮ್ಮಪ್ಪ ಅವರಿಗೆ ಅವರ ಅವಧಿಯಲ್ಲಿ ಇಂತಹ ಸಾಗುವಳಿದಾರರು ಕಾಣಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
 ಪಟ್ಟಣದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಕೆಜೆಪಿಯಿಂದ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ರೈತರ ಬಗರ್ ಹುಕುಂ ಭೂಮಿ ಕೈತಪ್ಪಲು ಜೆಡಿಎಸ್ ಕಾರಣ. ಜನಸಾನ್ಯರ ಕುರಿತು ಕಾಳಜಿ ಇಲ್ಲದ ಕಾಂಗ್ರೇಸ್ ಕಾರಣ ಎಂದರು.
ಕುತಂತ್ರ ಸೃಷ್ಟಿ: ಅಧಿಕಾರದ ಲಾಲಸೆಯಿರುವ ಇಂತಹವರು ಈ ರೀತಿ ಚುನಾವಣೆ ವೇಳೆ ಮುಗ್ಧರನ್ನು ಹಾದಿತಪ್ಪಿಸುವ, ಅನುಕಂಪದ ಅಲೆ ಸೃಷ್ಟಿಸುವ ಕುತಂತ್ರ ನಡೆಸುತ್ತಾರೆ ಎಂದ ಅವರು ಸೊರಬ ಕ್ಷೇತ್ರದಿಂದ ಸ್ಪರ್ಧಿಸಿರುವ ಸಹೋದರರ ಬಗ್ಗೆ ಎಚ್ಚರವಿರಲಿ ಎಂದರು.
 ಸತತ 40 ವರ್ಷಕ್ಕೂ ಮಿಕ್ಕಿ ಜನಪ್ರತಿನಿಧಿಯಾಗಿ ತಾಲೂಕಿಗೆ ಮಾಡಿದ್ದೇನು ಎಂಬ ಬಗ್ಗೆ ಜನ ಅರಿತು ಹಾಲಪ್ಪ ಅವರನ್ನು ಬೆಂಬಲಿಸಿದ್ದೀರಿ. ಚುನಾವಣೆಗೆ ಪೂರ್ವದಲ್ಲಿ ನಾವು ನೀಡಿದ ವಾಗ್ದಾನದಂತೆ ನಡೆದುಕೊಂಡಿದ್ದೇವೆ.  ಇಂದು ಸೊರಬದ ಇಡೀ ಚಿತ್ರಣವೇ ಬದಲಾಗಿರುವುದಕ್ಕೆ ಹಾಲಪ್ಪ ಕಾರ್ಯವೈಖರಿ, ಜನತೆಯ ಬೆಂಬಲವೇ  ಕಾರಣ ಎಂದರು.
 ಅಧಿಕಾರಕ್ಕಾಗಿ ಟೋಪಿ ಹಾಕುವವರ ಬಗ್ಗೆ ಎಚ್ಚರದಿಂದಿರಿ. ಕೈಕತ್ತರಿಸುತ್ತೇವೆ ಎಂದರೂ ಅಂತವರಿಗೆ ಓಟು ಹಾಕಬೇಡಿ, ಕೆಜೆಪಿಯನ್ನು ಬೆಂಬಲಿಸಿ ಎಂದು ಮತಯಾಚಿಸಿದರು. ಸೇರಿದ್ದ ಭಾರಿ ಜನಸಮೂವನ್ನು ಗಮನಿಸಿದ ಅವರು ಇದು ಪ್ರಚಾರ ಸಭೆಯೋ ವಿಜಯೋತ್ಸವದ ಸಭೆಯೋ ಎಂದು ಭಾಸವಾಗುತ್ತಿದೆ ಎಂದರು.  ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಹಾಲಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಈ ಬಾರಿ ನಡೆದ ಪಪಂ ಚುನಾವಣೆ ವೇಳೆ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದ ಡಿ.ಆರ್. ಶ್ರೀಧರ್ ಮತ್ತು ಅವರ ಸೊಸೆ ಶ್ರೀರಂಜಿನಿ ಸೇರಿದಂತೆ ಹಲವರು ಕೆಜೆಪಿಗೆ ಸೇರಿದರು.  ತಾಲೂಕು ಕೆಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್, ಶಿಕಾರಿಪುರದ ಅಗಡಿ ಅಶೋಕ್, ಗುರುಮೂರ್ತಿ, ತಾಪಂ ಸದಸ್ಯ ಗುರುಕುಮಾರ್ ಪಾಟೀಲ್, ತಾಲೂಕು ಮುಖಂಡ, ಕಾರ್ಯಕರ್ತರು ಮೊದಲಾದವರು ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement